ಪೋಪ್: ಸ್ವಯಂ-ಘೋಷಿತ ದೇವಮಾನವ ಮತ್ತು ದೇಶವೊಂದರ ಅರಸ - ಹಳತು ಹೊನ್ನು


Unable to download this image. Please refresh the page (Ctrl+F5) - Halatu Honnu


ಸೂಚನೆಗಳು:

೧.      ನೀವು ಮುಕ್ತ ಮನಸ್ಸಿನವರಾಗಿದ್ದು, ನೈಜವಾಗಿ ಯೋಚಿಸುವ ಸಾಮರ್ಥ್ಯವಿದ್ದಲ್ಲಿ ಈ ಲೇಖನ ನಿಮಗಾಗಿ. ದಯವಿಟ್ಟು ಕೊನೆಯವರೆಗೆ ಓದನ್ನು ಮುಂದುವರೆಸಿ.
೨.      ನೀವು ಕೇವಲ ಭಾವನೆಗಳಿಗೆ ಜೋತುಬಿದ್ದು ಸ್ವಂತ ಸ್ವಪ್ನ-ಲೋಕದಲ್ಲಿ ಬದುಕುವವರಾಗಿದ್ದರೆ, ಈ ಲೇಖನವನ್ನು ಓದದಂತೆ ನಾವು ಶಿಫಾರಸು ಮಾಡುತ್ತೇವೆ. ಈ ಲೇಖನದ ವಿಷಯವು ತಮ್ಮ ಕಲ್ಪನೆಗಳನ್ನು ಅಥವಾ ಭಾವನೆಗಳನ್ನು ಪ್ರಶ್ನಿಸಬಹುದು.
೩.      ಈ ಲೇಖನದ ಲೇಖಕರು "ವ್ಯಾಟಿಕನ್ ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿ-ನೀತಿಗಳನ್ನು" ಮತ್ತು "ಮುಖ್ಯವಾಹಿನಿಯಿಂದ ಮರೆಮಾಚಲ್ಪಟ್ಟ ಪರದೆಯ ಹಿಂದೆ ನಡೆಯುವ ವಿದ್ಯಮಾನಗಳನ್ನು" ಸೂಕ್ಷ್ಮವಾಗಿ ಗಮನಿಸುತ್ತಾ ಅಧ್ಯಯನ ನಡೆಸುತ್ತಿರುವ, ಭಾರತದ ಕನ್ನಡ ಕಥೋಲಿಕ ಕ್ರೈಸ್ತರು.
೪.      ಈ ಲೇಖನದ ಲೇಖಕರು ಯಾವುದೇ ರಾಜಕೀಯ ಪಕ್ಷದೊಂದಿಗೆ (ವಸ್ತುವಿನೊಂದಿಗೆ) ಪ್ರತ್ಯಕ್ಷ/ಪರೋಕ್ಷ ಸಂಪರ್ಕವನ್ನು ಹೊಂದಿರುವುದಿಲ್ಲ.

ನೀವು ಈ ಲೇಖನವನ್ನು ಪೂರ್ತಿ ಓದಿಮುಗಿಸಿದ ನಂತರ,
"ವಾಃ! ಈ ಲೇಖನ ನಿಜವಾಗಿಯು ನನ್ನ ಕಣ್ಣು ತೆರೆಸಿತು. ಈ ಪ್ರಪಂಚದಲ್ಲಿ ನಡೆಯುತ್ತಿರುವುದನ್ನು ಇನ್ನಷ್ಟು ಸರಿಯಾಗಿ ಅರ್ಥೈಸಿಕೊಳ್ಳಲು ಸಹಾಯಮಾಡಿತು",
ಅಥವಾ
" 'ಈ ಲೇಖಕ ಒಬ್ಬ ಅಸುರ' ಅಥವಾ 'ಈ ಲೇಖಕನಲ್ಲಿರುವ ದುರಾತ್ಮ ಹೀಗೆ ಹೇಳಿಸುತ್ತಿದೆ' (ವ್ಯಾಟಿಕನ್ ತನ್ನ ಅಪರಾಧ ಕೃತ್ಯಗಳನ್ನು ಪ್ರಶ್ನೆಮಾಡುವವರ ಬಗ್ಗೆ ನುಡಿಯುವಂತೆಯೇ)"
ಎಂದು ಉದ್ಗರಿಸುತ್ತೀರಿ.

ಈಗ ಲೇಖನವನ್ನು ಆರಂಭಿಸೋಣ...

ನೀವು "ದೇವರನ್ನು ಅಥವಾ ಮೋಕ್ಷವನ್ನು ಅರಸುತ್ತಿರುವ ಒಬ್ಬ ಸನ್ಯಾಸಿ" ಎಂದು ಊಹಿಸಿಕೊಳ್ಳಿ. ಈಗ ಕೆಳಗೆ ಪಟ್ಟಿಮಾಡಿರುವ ಕೆಲ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳನ್ನು ಹೊಂದಲು ಪ್ರಯತ್ನಿಸಿ.

೧.      ನೀವು ದೇಶವೊಂದರ ಅರಸನಾಗಲು ಬಯಸುವಿರೊ?
೨.      ನೀವು ಈ ಭೂಮಿಯಮೇಲೆ ಹೆಚ್ಚು-ಹೆಚ್ಚಾಗಿ ಸಂಪತ್ತನ್ನು ಕೂಡಿಡಲು ಬಯಸುವಿರೊ?
೩.      ನೀವು ಹೇಗಾದರೂ ಮಾಡಿ ಭೂಮಿಯ ತುಂಬೆಲ್ಲಾ ಹೆಚ್ಚೆಚ್ಚು ಜನರ ಮೇಲೆ ನಿಮ್ಮ ಪ್ರಾಭವವನ್ನು ಹರಡಲು ಬಯಸುವಿರೊ (ಬೇರೆಯವರ ಆಲೋಚನೆಗಳು ನಿಮ್ಮ ಯೋಚನೆಗಳೊಂದಿಗೆ ಹೊಂದಾಣಿಕೆಯಾಗದಿದ್ದರೆ ಅಂತಹವರನ್ನು ಕೊಂದಾದರೂ ಸರಿ)?
೪.      ಇಲ್ಲಿಯವರೆಗೆ ಇದ್ದು-ಹೋದ ರಾಜ-ರಾಣಿಯರಂತೆ ನೀವುಕೂಡ ಬೇರೆ ದೇಶ-ಜನಾಂಗಗಳ ಮೇಲೆ ಪ್ರತ್ಯಕ್ಷ/ಪರೋಕ್ಷ ಯುದ್ಧಗಳನ್ನು ಮಾಡಲು ಬಯಸುವಿರೊ?
೫.      ನೀವು "ನಾನಾಷ್ಟೇ ಸರಿ, ನನ್ನ ದಾರಿಯಷ್ಟೇ ಸರಿಯಾದದ್ದು. ಈ ಪ್ರಪಂಚದಲ್ಲಿ ಮಿಕ್ಕಿದ್ದೆಲ್ಲವೂ/ಮಿಕ್ಕವರೆಲ್ಲರೂ ತಪ್ಪು" ಎಂದು ಹೇಳುವಿರೊ ಅಥವಾ ವರ್ತಿಸುವಿರೊ?
೬.      ನೀವು ಬೇರೆ ಜನರ ವಿಷಯಗಳಲ್ಲಿ ವಿನಾಃಕಾರಣ ಮೂಗುತೂರಿಸುವಿರೊ?

ಈಗ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳನ್ನು ಪಟ್ಟಿಮಾಡಿ ನೋಡಿ. ಸಹಜವಾಗಿಯೇ ನೀವು ಅವುಗಳಿಗೆಲ್ಲ "ಇಲ್ಲ" ಎಂದೇ ಉತ್ತರ ನೀಡಿರುತ್ತೀರಿ.

              ನಾವು ಸನ್ಯಾಸಿಗಳೆಂದರೆ "ಮೋಕ್ಷವನ್ನು ಅರಸುತ್ತಿರುವ, ನಂಬಿಗಸ್ತ, ಒಳ್ಳೆಯ ಮನುಷ್ಯರು" ಎಂದು ಪರಿಗಣಿಸುತ್ತೇವೆ. ಮತ್ತು ಒಂದುವೇಳೆ ಒಬ್ಬ ಸನ್ಯಾಸಿ ಲೌಖಿಕ ಸುಖ-ಭೋಗಗಳಿಗೆ ಆಸೆಬುರುಕನಾಗಿದ್ದರೆ ಅಂತಹವನನ್ನು ನಾವು ಸಹಜವಾಗಿಯೇ ತಿರಸ್ಕರಿಸುತ್ತೇವೆ.

              ಒಂದುವೇಳೆ "ದೇವರನ್ನು ಅಥವಾ ಮೋಕ್ಷವನ್ನು ಅರಸುವುದೇ ನನ್ನ ಜೀವನದ ಅರ್ಥ ಅಥವಾ ಧ್ಯೇಯವಾದರೆ", ನಾನು ಖಂಡಿತವಾಗಿಯು ಹಣ, ಅಧಿಕಾರ ಮತ್ತಿತರ ಲೌಖಿಕ ಸಂಪತ್ತಿಗೆ ಆಸೆಬುರುಕನಾಗಿ ಬದುಕುವುದಿಲ್ಲ. ಧ್ಯಾನ, ಪ್ರಾರ್ಥನೆ ಮತ್ತು ಒಳ್ಳೆಯ ಜೀವನ ನಡೆಸುವುದಕ್ಕಿಂತ ಬೇರೆ ಯಾವುದು ನನಗೆ ಅತೀ ಮುಖ್ಯವಾಗುತ್ತದೆ?

              ಭಾರತದ ಹೊರಗಡೆ ಸಾಕಷ್ಟು ಸ್ವಯಂ-ಘೋಷಿತ ದೇವಮಾನವರು ನೆಲೆಸಿದ್ದಾರೆ. ಅವರೆಲ್ಲರು ಕೇವಲ ಮೋಕ್ಷವನ್ನರಸದೆ, ಬೇರೆ ಜನರ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಮತ್ತು ಅದನ್ನು ಹೆಚ್ಚೆಚ್ಚು ಜನರಿಗೆ ವಿಸ್ತರಿಸಲು ಕಾತುರರಾಗಿದ್ದಾರೆ. ಅವರ ಈ ನಡೆಯು "ಅವರು ತಮ್ಮಬಗ್ಗೆ ಹೇಳಿಕೊಳ್ಳುವ ಮಾತುಗಳು" ಮತ್ತು "ಅವರು ನಿಜಜೀವನದಲ್ಲಿ ಕೈಗೊಳ್ಳುವ ಕಾರ್ಯಗಳ" ಮಧ್ಯೆ ಸಂಘರ್ಷವಾಗುವಂತೆ ತೋರುತ್ತವೆ!

              ವ್ಯಾಟಿಕನ್ನಿನ ಪೋಪ್ ಆ ಸ್ವಯಂ-ಘೋಷಿತ ದೇವಮಾನವರಲ್ಲಿ ಒಬ್ಬ. ಆತ ವ್ಯಾಟಿಕನ್ ದೇಶದ ಅಧಿಕೃತ ಅರಸ ಮತ್ತು ಪ್ರಪಂಚದಲ್ಲಿರುವ ಶ್ರೀಮಂತ ರಾಜರಲ್ಲಿ ಒಬ್ಬ. ಆತ ತನ್ನನ್ನು ತಾನು ಕೇವಲ ಒಬ್ಬ ಸನ್ಯಾಸಿ ಎಂಬಂತೆ ಬಿಂಬಿಸಿಕೊಳ್ಳುತ್ತಾನೆ.

              ಪೋಪ್ ಎಂದು ಕರೆಯಲ್ಪಡುವ ಆ ಸನ್ಯಾಸಿಗೆ ದೇವರ ಅಥವಾ ಮೋಕ್ಷದ ಬಗ್ಗೆ ಬೋಧನೆ ಮಾಡುವುದೊಂದೇ ಧ್ಯೇಯವಾದರೆ ಆತನಿಗೆ ರಾಜನ ಜೀವನ, ಅರಸನ ಅಧಿಕಾರ, ಲೌಖಿಕ ಆಸ್ತಿ, ಐಷಾರಾಮಿ ಜೀವನಶೈಲಿ, ಇತರ ಜನರ ಮೇಲೆ ಹಿಡಿತ, ಇತ್ಯಾದಿ ಎಲ್ಲ ಏಕೆ ಬೇಕು? ಮುಖ್ಯವಾಗಿ, ಸಭಾಮಂಟಪಗಳಲ್ಲಿ ಬೇರೆ ಜನರಿಗೆ ಒಳ್ಳೆಯ ಜೀವನದ ಬಗ್ಗೆ ಉಪದೇಶ ಮಾಡುವ ಸನ್ಯಾಸಿಯು ಹೇಗೆತಾನೆ ತಾನು ಪ್ರತ್ಯಕ್ಷ/ಪರೋಕ್ಷ ಅಪರಾಧಗಳನ್ನು ಮಾಡುತ್ತಾನೆ? ತನ್ನ ಇತಿಹಾಸದ್ದುದ್ದಕ್ಕೂ ವ್ಯಾಟಿಕನ್ ತನ್ನನ್ನು ಪ್ರಶ್ನೆಮಾಡುವ ಜನರ ಧ್ವನಿಗಳನ್ನು ಹೊಸಕಿ ಹಾಕುವುದರಲ್ಲಿ ತುಂಬಾ ಉತ್ತೀರ್ಣವಾಗಿದೆ. ಪೋಪ್ ಒಂದು ದೇಶದ ಅಧಿಕೃತ ರಾಜನಾಗಿರುವುದರಿಂದ ಹೀಗೆ ಮಾಡುವುದು ಅತೀ ಸರಳವಾಗುತ್ತದೆ. ಮತ್ತು ಈ ಅರಸನ ಬಳಿಯಿರುವ ಅಪಾರವಾದ ಸಂಪತ್ತು ಆತನಿಗೆ ಬೇಕಾದಹಾಗೆ ತಂತ್ರ/ಮಾಟ ಮಾಡಲು ಸಹಾಯಮಾಡುತ್ತದೆ.

              ನೆನಪಿರಲಿ, ಪೋಪ್ ಎಂಬ ರಾಜ ಬಹಿರಂಗ ಸಭೆಗಳಲ್ಲಿ ಆಧ್ಯಾತ್ಮ, ಸ್ವಾತಂತ್ರ್ಯ, ಸರಳ ಜೀವನ, ಇತರರನ್ನು ಗೌರವಿಸುವುದು, ಪ್ರೀತಿ ಮತ್ತು ಶಾಂತಿಯ ಬಗ್ಗೆ ಬೋಧನೆ ಮಾಡುತ್ತಾನೆ. ಆದರೆ ತನ್ನ ನಿಜಜೀವನದಲ್ಲಿ ಆತ ತನ್ನ ಸಾಮ್ರಾಜ್ಯದ ವಿಸ್ತರಣೆಗೆ ಅತೀ ಉತ್ಸುಕನಾಗಿದ್ದಾನೆ. ಈ ಮೂಲತಃ ಕಾರಣದಿಂದಾಗಿ ಕಥೊಲಿಕ ಸಭೆಯನ್ನು ಅತ್ಯಂತ ಕಟ್ಟು-ನಿಟ್ಟಾಗಿ ನಿರ್ಮಿಸಿ ನಿರ್ವಹಿಸಲಾಗಿದೆ. ಮತ್ತು ಈ ರೀತಿಯ ಕಟ್ಟು-ನಿಟ್ಟಿನ ರಚನೆಯು, "ಸಾಮಾನ್ಯ ಜನರ ಮೇಲೆ" ಅಥವಾ "ಒಬ್ಬ ವ್ಯಕ್ತಿ ಏನು ಮಾಡಬಹುದು" ಮತ್ತು "ಒಬ್ಬ ವ್ಯಕ್ತಿ ಏನು ಮಾಡಲಾಗದು" ಎನ್ನುವುದರ ಮೇಲೆ ಪೋಪ್ ಎಂಬ ರಾಜನಿಗೆ ಸಂಪೂರ್ಣ ಹಿಡಿತವನ್ನು ನೀಡುತ್ತದೆ.

              ತನ್ನ ಹಿಂಬಾಲಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ತನ್ನ ವಿಶ್ಲೇಷಣೆಗೆ (ವ್ಯಾಟಿಕನ್ನಿನ ಅಧಿಕಾರದ ಆಟಕ್ಕೆ) ಬಳಸುವ ಜಾತಿ ಪ್ರಪಂಚದಲ್ಲಿ ವ್ಯಾಟಿಕನ್ನಿನ ಕಥೊಲಿಕವೊಂದೆ ಆಗಿದೆ. ಪ್ರತೀ ವ್ಯಕ್ತಿಯು ತನ್ನ ಜೀವನದ ಮುಖ್ಯ ಘಟನೆಗಳ ಬಗ್ಗೆ ಮಾಹಿತಿಯನ್ನೆಲ್ಲ ಆಡಳಿತದೊಂದಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ನಿಯಮಗಳಿವೆ. ನೀವು ಕ್ರೈಸ್ತ(ಕೆಥೊಲಿಕ)ರಾಗಿದ್ದರೆ ನೀವು ಕಡ್ಡಾಯವಾಗಿ ಪ್ರತೀ ತಿಂಗಳು (ನಿಯತಕಾಲಿಕವಾಗಿ) ನಿರ್ದಿಷ್ಟ ಹಣವನ್ನು ಇಗರ್ಜಿಗೆ ಸಲ್ಲಿಸುವಂತೆಯೂ ನಿಯಮವಿದೆ. ಒಂದುವೇಳೆ ನೀವು ಆ ಹಣವನ್ನು ಕೊಡದೇಹೋದಲ್ಲಿ, "ನಿನ್ನ ಆದಾಯದ ಹತ್ತು ಪ್ರತಿಷತಃ (೧೦%)ವನ್ನು ದೇವರಿಗೆ ಕೊಡು" ಎಂಬ ವಾಕ್ಯವನ್ನು ವ್ಯಾಟಿಕನ್ ತನ್ನ ಸ್ವಂತ ಆವೃತ್ತಿಯ ಬೈಬಲ್ಲಿನಿಂದ ತೆಗೆದು ನಿಮಗೆ ತೋರಿಸುತ್ತದೆ. ಆ ಹತ್ತು ಪ್ರತಿಷತಃ ಎನ್ನುವ ಮೊತ್ತ ಯಾವತ್ತಾದರೂ ಕಾಲ-ತಲೆಮಾರಿಗೆ ತಕ್ಕಂತೆ ಬದಲಾಗಿದೆಯೋ ಇಲ್ಲವೊ ನನಗೆ ಖಾತರಿಯಾಗಿಲ್ಲ! ಈ ತರಹದ ಅನೇಕ ವಾಕ್ಯಗಳನ್ನು ವ್ಯಾಟಿಕನ್ ತನ್ನದೇ ಆವೃತ್ತಿಯ ಬೈಬಲ್ಲಿನಲ್ಲಿ ಹೊಂದಿದೆ, ಮತ್ತು ಆ ವಾಕ್ಯಗಳ ಆಧಾರದ ಮೇಲೆ ಮಾನವ-ಮತ್ತು-ದೇವರ ಮಧ್ಯೆ ತನ್ನ ದಲ್ಲಾಳಿ ಕೆಲಸಕ್ಕೆ ಹಕ್ಕುಸಾಧನೆ ಮಾಡುತ್ತದೆ. ಒಂದುವೇಳೆ ನೀವೇನಾದರು ವ್ಯಾಟಿಕನ್ ಹೇಳುವ ಕತೆಗಳನ್ನು ಕೇಳಿ, ವ್ಯಾಟಿಕನ್ ಹೇಳಿದ ದಾರಿಯಲ್ಲಿ ನಡೆಯದೆಹೋದರೆ, ನಿಮ್ಮನ್ನು ಭಯಪಡಿಸಲು ಅದಕ್ಕೆ ಎಲ್ಲ ಸಂದರ್ಭಕ್ಕೆ ಹೊಂದುವಂತಹ ವಾಕ್ಯಗಳನ್ನು ವ್ಯಾಟಿಕನ್ ತನ್ನ ಸ್ವಂತ ಆವೃತ್ತಿಯ ಬೈಬಲ್ಲಿನಲ್ಲಿ ತಯಾರಿಮಾಡಿಟ್ಟಾಗಿದೆ.
"ಮನುಷ್ಯರ ದೇಹಗಳನ್ನು ಜೀವಂತವಾಗಿ ಕುದಿಯುವ ಎಣ್ಣೆಯಲ್ಲಿ ಹಾಕಿ ಸುಡುವ", "ರಾಕ್ಷಸರು ಮನುಷ್ಯರ ದೇಹಗಳನ್ನು ಜೀವಂತವಾಗಿ ಗರಗಸದಿಂದ ಕತ್ತರಿಸುವ", ಮತ್ತಿತರೆ ಕತೆಗಳು ನೆನಪಿರಬೇಕಲ್ಲ?!

              ಈಗ ಅವರಿಗೆ ನನ್ನನ್ನು ಒಬ್ಬ ರಾಕ್ಷಸ ಅಥವಾ ದುಷ್ಟ ಆತ್ಮದಿಂದ ತುಂಬಿದವ ಎಂದು ಚಿತ್ರಿಸಲು ಬೇಕಾದ ವಾಕ್ಯಗಳೆಲ್ಲ ಸುಲಭವಾಗಿ ದೊರೆಯುತ್ತವೆ. ಏಕೆಂದರೆ ನಾನು ವ್ಯಾಟಿಕನ್ನಿನ ವ್ಯಾಮೋಹವನ್ನು ಪ್ರಶ್ನೆ ಮಾಡುತ್ತಿದ್ದೆನಲ್ಲವೇ. ನಾನು ಕೇವಲ ವ್ಯಾಟಿಕನ್ನಿನ ಸ್ವಯಂ-ಘೋಷಿತ ದೇವಮಾನವನನ್ನು ಪ್ರಶ್ನೆಮಾಡುತ್ತಿರುವುದರಿಂದ, ವ್ಯಾಟಿಕನ್ನಿನ ಪ್ರಕಾರ ನಾನು ದುಷ್ಟ ಶಕ್ತಿಯಿಂದ ತುಂಬಿದವನಾಗಿ, ಸೈತಾನನಿಂದ ಪ್ರೇರಿತನಾಗಿರುತ್ತೇನೆ :-D

              "ಮನುಷ್ಯರಿಗೆ ಒಳ್ಳೆಯದನ್ನು ಬೋಧನೆ ಮಾಡುವುದು" ಒಳ್ಳೆಯ ಕೆಲಸವೇ. ಆದರೆ ಇತರರಿಗೆ ಒಳ್ಳೆಯ ಜೀವನ ನಡೆಸುವಂತೆ ಬೋಧಿಸುವ ಮೊದಲು, ನಾನು ಸ್ವತಃ ಆ ಒಳ್ಳೆಯ ಜೀವನವನ್ನು ನಡೆಸಬೇಕು. ಇಲ್ಲವಾದರೆ, ನಾನು ಪರರಿಗೆ ಮಾಡುವ ಬೋಧನೆ ಸರಿಯೆಂದು ಹೇಗೆತಾನೆ ಹೇಳಿಕೊಳ್ಳಬಹುದು?!

ಯೇಸುಸ್ವಾಮಿಯ ಮಾರ್ಗದಲ್ಲಿ ಜೀವಿಸಲು ಅಥವಾ ದೇವರಲ್ಲಿ ವಿಶ್ವಾಸವಿಟ್ಟು ಬದುಕಲು, ನಾವು ಈ ವಿದೇಶಿ ಅರಸನ ಗುಲಾಮರಾಗಿ ಇರಲೇಬೇಕೆ?

೧. ನಮ್ಮ ಭಾರತೀಯ ಕಥೊಲಿಕ ಕ್ರೈಸ್ತರಿಗೆ ಈ ವಿದೇಶಿ ಅರಸನ ಹಿಡಿತವಿಲ್ಲದೆ ಯೇಸುವಿನಲ್ಲಿ ಪ್ರಾರ್ಥಿಸಲು ಬರುವುದಿಲ್ಲವೇ?
೨. ನಮ್ಮ ಭಾರತೀಯ ಗುರುಗಳಿಗೆ / ಕನ್ಯಾಸ್ತ್ರೀಯರಿಗೆ ನಮ್ಮ ಮಕ್ಕಳಿಗೆ ಯೇಸುವಿನ ವಾಕ್ಯಗಳನ್ನು ಬೋಧಿಸಲು ಬರುವುದಿಲ್ಲವೇ?
೩. "ಹೇಗೆ ಬೋಧಿಸಬೇಕು, ಏನು ಬೋಧಿಸಬೇಕು, ಇತ್ಯಾದಿ"ಗಳ ಬಗ್ಗೆ ನಮ್ಮ ಗುರುಗಳಿಗೆ / ಕನ್ಯಾಸ್ತ್ರೀಯರಿಗೆ ಈ ವಿದೇಶಿ ಅರಸನಿಂದ ಆಜ್ಞೆ ಬರಲೇಬೇಕೆ?
೪. ಯೇಸುಸ್ವಾಮಿ ಎಂದಿಗೂ "ಈ ವ್ಯಾಟಿಕನ್ ಅರಸನಿಗೆ ತಲೆಬಾಗಿದಾಗ ಮಾತ್ರ ನೀವು ನನ್ನನ್ನು ವಿಶ್ವಾಸಿಸಲು ಸಾಧ್ಯ" ಎಂದು ಹೇಳುವುದಿಲ್ಲ!
೫. ಬ್ರಿಟೀಷ್ ಕ್ರೈಸ್ತರು ವ್ಯಾಟಿಕನ್ ರಾಜನ ಆಜ್ಞೆಗಳನ್ನು ಒಪ್ಪುವುದಿಲ್ಲ. ಅವರು ತಮ್ಮದೇ ಆದ ಕ್ಯಾಂಟರ್ಬರಿಯ ಗುರುವಿನ ಆಜ್ಞೆಗಳನ್ನು ಪಾಲಿಸುತ್ತಾರೆ!
೬. ರಶಿಯನ್ ಕ್ರೈಸ್ತರು ವ್ಯಾಟಿಕನ್ ರಾಜನ ಹಿಡಿತವನ್ನು ಒಪ್ಪುವುದಿಲ್ಲ. ಅವರು ತಮ್ಮದೇ ಆದ ಕ್ರೈಸ್ತ-ಪದ್ಧತಿಯನ್ನು ಪಾಲಿಸುತ್ತಾರೆ!
೭. ಗ್ರೀಕ್ ಕ್ರೈಸ್ತರು ವ್ಯಾಟಿಕನ್ ರಾಜನ ಹಿಡಿತವನ್ನು ಒಪ್ಪುವುದಿಲ್ಲ. ಅವರು ತಮ್ಮದೇ ಆದ ಕ್ರೈಸ್ತ-ಪದ್ಧತಿಯನ್ನು ಪಾಲಿಸುತ್ತಾರೆ!
೮. ಅಷ್ಟು ದೂರವೇಕೆ, ವ್ಯಾಟಿಕನ್ನಿನ ಪಕ್ಕದ ಮನೆಯವರಾದ (ವಾಸ್ತವದಲ್ಲಿ ವ್ಯಾಟಿಕನ್ನಿನ ತಾಯಿಯಾದ) ಇಟಲಿಯ ಪ್ರಜೆಗಳು ವ್ಯಾಟಿಕನ್ ರಾಜನು ತಮ್ಮ ಆಂತರಿಕ ವಿಷಯಗಳಲ್ಲಿ ಅನಗತ್ಯ ಮಧ್ಯಸ್ತಿಕೆ ತೋರುವುದನ್ನು ಸಹಿಸುವುದಿಲ್ಲ!
೯. ಚೈನಾದ ಕ್ರೈಸ್ತರು ವ್ಯಾಟಿಕನ್ ರಾಜನ ಆಧಿಪತ್ಯವನ್ನು ಒಪ್ಪುವುದಿಲ್ಲ!

ಸಂಪೂರ್ಣ ಭಾರತೀಯ ಸಮಾಜ (ಜಾತಿ-ಮತಗಳನ್ನು ಪರಿಗಣಿಸದೆ) ೧೯೪೭ರಲ್ಲಿಯೇ ಸ್ವಾತಂತ್ರ್ಯವನ್ನು ಪಡೆಯಿತು, ಆದರೆ ಇಂದಿನವರೆಗೂ ನಾವಷ್ಟೇ (ಕಥೊಲಿಕರಷ್ಟೇ) ಏಕೆ ಪರಕೀಯರ ದಾಸತ್ವದಲ್ಲಿ ಜೀವನ ತಳ್ಳುತ್ತಿದ್ದೇವೆ!

ನಾವಿನ್ನೂ ನಮ್ಮ ಸ್ವಾತಂತ್ರ್ಯವನ್ನು ಪಡೆಯಬೇಕಿದೆ!
ನಾವು ಸ್ವಂತಂತ್ರ ದೇಶದಲ್ಲಿದ್ದರೂ, ಪರಕೀಯರ ಮೇಲೆ ಇನ್ನೂ ಅವಲಂಬನೆಯಾಗಿದ್ದೇವೆ!
ನಾವು ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗಿದ್ದರೂ, ನಮಗೆ ಪ್ರಭುತ್ವವಿಲ್ಲ (ಪ್ರಜಾಪ್ರಭುತ್ವ ದೊರೆತಿಲ್ಲ)!
ನಾವು ನಮ್ಮ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳನ್ನೆಲ್ಲ ಆಯ್ಕೆಮಾಡುತ್ತೇವೆ. ಆದರೆ ನಮ್ಮಿಂದ ಆಯ್ಕೆಯಾಗದ ಪರದೇಶಿ ಅರಸನಿಂದ ಆಳಲ್ಪಡುತ್ತಿದ್ದೇವೆ ("ಪೋಪ್ ದೇವರಿಂದ ಆಯ್ಕೆಯಾದ ರಾಜ" ಎಂದು ವ್ಯಾಟಿಕನ್ ಕಿರುಚಬಹುದು :-D)!

              ನಾವು ಪ್ರಪಂಚದಲ್ಲಿಯೇ ಅತ್ತ್ಯುತ್ತಮ ವ್ಯಕ್ತಿಗಳನ್ನು (ಗುರುಗಳನ್ನು / ಕನ್ಯಾಸ್ತ್ರೀಯರನ್ನು) ಹೊಂದಿದ್ದೇವೆ ಆದರೂ ನಾವಿನ್ನೂ ವಿದೇಶದ ಸ್ವಯಂ ಘೋಷಿತ ದೇವಮಾನವನ್ನೊಬ್ಬನ ಗುಲಾಮರಾಗಿ ಬದುಕುತ್ತಿದ್ದೇವೆ. ಈ ನಡೆ ನಮ್ಮ ಗುರುಗಳಿಗೆ (ಬಿಶೋಪ್, ಕಾರ್ಡಿನಲ್, ಕನ್ಯಾಸ್ತ್ರೀಯರು, ಇತ್ಯಾದಿ) ನಾವೇ ತೋರುವ ಅಗೌರವವಾಗಿ ಪರಿಣಮಿಸುತ್ತದೆ. ನಮ್ಮ ಗುರುಗಳು / ಕನ್ಯಾಸ್ತ್ರೀಯರು ವಿದೇಶಿ ನಿಯಂತ್ರಣವಿಲ್ಲದೆ ಯೇಸುಸ್ವಾಮಿಯ ವಾಕ್ಯವನ್ನು ಅತೀ ಚೆನ್ನಾಗಿ ಬೋಧಿಸಲು ಶಕ್ತರು.  ಅವರಿಗೆ ಯೇಸುವಿನ ಜೀವನದ ಅರಿವು ಮತ್ತು ಅನುಭವವಿದೆ. ನಮ್ಮ ಗುರುಗಳು ಯೇಸುವಿನ ಬಗ್ಗೆ ಅರಿತ್ತಿದ್ದಾರೆ ಮತ್ತು ಸ್ವಾವಲಂಭಿಗಳಾಗಿ ಆ ಅನುಭವವನ್ನು ನಮ್ಮ ಮಕ್ಕಳಿಗೆ/ಜನರಿಗೆ ಅದನ್ನು ಹೇಳಿಕೊಡಬಲ್ಲರು.
              ನಾವು, ಅಂದರೆ ಭಾರತದ ಕ್ರೈಸ್ತರು ಯೇಸುವಿನ ತುಂಬಾ ಪ್ರಾಮಾಣಿಕ ಮತ್ತು ಒಳ್ಳೆಯ ಹಿಂಬಾಲಕರಾಗಿದ್ದೇವೆ, ಆದುದರಿಂದಲೇ ನಾವು ಇಲ್ಲಿಯವರೆಗೂ ವ್ಯಾಟಿಕನ್ನಿನ ಪಾಪ-ಕೃತ್ಯಗಳ ಬಗ್ಗೆ ಮೌನವಾಗಿದ್ದೆವು. ನೈಜವಾಗಿ ಈ ವಿದೇಶಿ ಅರಸ ಹೊಂದಿರುವ ಸಂಪತ್ತಿನಲ್ಲಿ ನಾವೇ ಬೃಹತ್ ಮೊತ್ತದ ದಾನವನ್ನು ನೀಡುತ್ತೇವೆ. ಏಕೆಂದರೆ, ನಾವು ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರೆಂದೆನಿಸಿದರೂ ಸಹ ವರ್ಷಕ್ಕೆ ಒಂದರಂತೆ "ಒಂದು ಆಸ್ಟ್ರೇಲಿಯಾಗೆ ಸಮನಾದ ಸಂಖ್ಯೆಯ ಕ್ರೈಸ್ತರನ್ನು ಹುಟ್ಟುಹಾಕುತ್ತೇವೆ"! ಖಂಡಿತ, ನಾವು ನೀಡುವ ಹಣವನ್ನು ದಾನವಾಗಿ ಕೊಡುತ್ತೇವೆ. ಆದರೆ, ನಮ್ಮ ಸಮಾಜ (ಭಾರತದ ಕ್ರೈಸ್ತ / ಕಥೊಲಿಕ)ದಲ್ಲೇ ಸಾಕಷ್ಟು ಸಂಖ್ಯೆಯಲ್ಲಿ ಸಹಾಯಕ್ಕಾಗಿ ಕಾದಿರುವ ಕಡು-ಬಡವರಿರುವಾಗ ಅದ್ಹೇಗೆ ನಾವು ನಮ್ಮ ಸಹಾಯವನ್ನು ಸಾಗರದಾಚೆಗೆ ತಳ್ಳಬಹುದು?!

ಮೊದಲು ನಾವು ನಮ್ಮ ದಾನದ ಮೊತ್ತವನ್ನು ವಿದೇಶಕ್ಕೆ ರವಾನಿಸುತ್ತೇವೆ.
ನಂತರ ಆ ದೇಶಗಳಿಂದ ಅಲ್ಪಮೊತ್ತವನ್ನು ಹಿಂಪಡೆಯಲು ಕಾಯುತ್ತೇವೆ.
ಆಮೇಲೆ ಬರುವ ಆ ಅಲ್ಪ ಮೊತ್ತವನ್ನು ನಮ್ಮ ಜನರ ಸಹಾಯಕ್ಕೆ / ಒಳಿತಿಗೆ ಬಳಸುತ್ತೇವೆ!

              ಇದೆಲ್ಲದರ ಬದಲಾಗಿ, ನಾವೇ ಸ್ವತಃ ನಮ್ಮ ಸಹಾಯದ / ದಾನದ ಮೊತ್ತವನ್ನು ನಮ್ಮದೇ ಸಮಾಜದ ಬಡಬಗ್ಗರ ಏಳಿಗೆಗೆ ಇಲ್ಲಿಯೇ ಬಳಸಿದರೆ ಎಷ್ಟೋ ಉತ್ತಮ. ಮತ್ತು ಹೀಗೆ ಮಾಡುವುದರಿಂದ ಸಾಕಷ್ಟು ಸಮಯ, ಶ್ರಮ, ಮೊತ್ತದ ಪೋಲಾಗುವಿಕೆ ಮತ್ತು ದುರುಪಯೋಗವನ್ನು ತಡೆಯಬಹುದು.
              "ನಾವು ಬೇರೆ ದೇಶದ ಬಡವರಿಗೂ ಸಹಾಯಮಾಡಬೇಕು" ಎನ್ನುವ ಆಲೋಚನೆಯೇ? ಹಾಗಾದರೆ, ನಾವು ಬೇರೆ ಮನೆಗಳ ಕಸಗುಡಿಸಲು ಹೋಗುವ ಮೊದಲು ನಮ್ಮ ಮನೆಯನ್ನು ಶುಚಿಗೊಳಿಸೋಣವೇ?! ಒಮ್ಮೆ ನಮ್ಮ ಸ್ವಂತ ಮನೆಯ ಶುಚಿಗೊಳಿಸುವ ಕೆಲಸ ಮುಗಿದಮೇಲೆ ಖಂಡಿತವಾಗಿ ಬೇರೆ ಮನೆಯವರಿಗೆ ಸಹಾಯಮಾಡೋಣ (ಮುಂದುವರಿದ ದೇಶಗಳೆಂದು ಕರೆದುಕೊಳ್ಳುವ ಸಮಾಜದ ಜನರು ಈಗ ಮಾಡುತ್ತಿರುವಂತೆ).

ಈ ದೇಣಿಗೆ/ಹಣದ ವಿಷಯವನ್ನು ನಮ್ಮ ಭಾರತದ ಗುರುಗಳಿಗೆ / ಕನ್ಯಾಸ್ತ್ರೀಯರಿಗೆ ಬಿಟ್ಟು, ನಾನು ಮುಂದಿನ ಅಂಶಕ್ಕೆ ಹೋಗುತ್ತೇನೆ...

              ಪೋಪ್ ಎಂಬ ಅರಸನ ಬಗ್ಗೆ ಕೇಳಿದಾಗಲೆಲ್ಲ ನಾವು (ಭಾರತದ ಕಥೊಲಿಕರು / ಕ್ರೈಸ್ತರು) ಬರೀ ಭಾವನಾತ್ಮಕವಾಗಿಯೇ ಉತ್ತರಿಸುತ್ತೇವೆ (ಏಕೆಂದರೆ ಅದು ನಮ್ಮ ಭಾರತೀಯ ರಕ್ತದಲ್ಲೇ ಬಂದಿದೆಯೇನೊ). ಒಮ್ಮೊಮ್ಮೆ "ಪೋಪ್ ದೇವರ ಪ್ರತಿನಿಧಿ", "ಪೋಪ್ ಈ ಲೋಕದ ಕ್ರೈಸ್ತರಿಗೆಲ್ಲ ತಂದೆಯಿದ್ದಂತೆ", "ಪೋಪ್ ದೇವರೆಡೆಗೆ ದಾರಿತೋರುವ ಮಾರ್ಗದರ್ಶಕ", ಇತ್ಯಾದಿ ಎಂದೆಲ್ಲಾ ಹೇಳುತ್ತೇವೆ.
              ಆದರೆ, ಈ ಭಾವನೆಗಳ ಕಾರ್ಮೋಡಗಳನ್ನೆಲ್ಲ ತುಸು ಬದಿಗೊತ್ತಿ ಪ್ರಾಯೋಗಿಕವಾಗಿ / ನೈಜವಾಗಿ ಯೋಚಿಸಿನೋಡೋಣ. ಪೋಪ್ ವ್ಯಾಟಿಕನ್ ಎಂಬ ದೇಶವೊಂದರ ಅರಸನಷ್ಟೆ. "ವ್ಯಾಟಿಕನ್ನಿನ ರಾಜನ ಮೂಲಕವಷ್ಟೇ ನೀವು ನನ್ನ ಬಳಿ ಬರಲು ಸಾಧ್ಯ" ಎಂದು ಯೇಸುವು ಎಂದಿಗೂ ಹೇಳುವುದಿಲ್ಲ. ಮತ್ತು, ಪೋಪ್ ಈ ಜಗತ್ತಿಗೆ ಯೇಸುವನ್ನು ಪರಿಚಯಿಸಿಲ್ಲ. ಯೇಸುವು ಹುಲುಮಾನವನ ಮೇಲೆ ಅವಲಂಬಿತರಾಗಿಲ್ಲ.

              "ಹೇಗೆ ಹರಿಹರದ ಆರೋಗ್ಯಮಾತೆಯು (ಸತ್ಯಮ್ಮ) ಹರಿಹರದ ಆ ಕಡುಬಡವ ಕುಟುಂಬಕ್ಕೆ ದರ್ಶನಕೊಟ್ಟರು" ಮತ್ತು "ಹೇಗೆ ಮಾತೆ ಮರಿಯಮ್ಮ ವೇಳಾಂಕಣ್ಣಿಯಲ್ಲಿ ಅದ್ಭುತವನ್ನು ಮಾಡಿದರು" ಎಂಬೆಲ್ಲ ಘಟನೆಗಳು ನೆನಪಿದೆ ಅಲ್ಲವೆ? ಆ ಯಾವುದೇ ಘಟನೆಗಳಲ್ಲಿ ಪೋಪ್ ಮಾತೆ ಮರಿಯಮ್ಮನವರಿಗೆ ನಿರ್ದಿಷ್ಟ ಕುಟುಂಬಗಳ ಹೆಸರನ್ನು ಶಿಫಾರಸು ಮಾಡಲಿಲ್ಲ. ಮತ್ತು ಮಾತೆ ಮರಿಯಮ್ಮನವರು ಪೋಪ್ ಬಳಿ ಹೋಗಿ "ಹೇಳು, ಮುಂದೇನು ಮಾಡಲಿ" ಎಂದು ಕೇಳುವುದಿಲ್ಲ. ನಿಮಗೆ ಪೋಪ್ಗೆ ಸಂಭಂದವೇ ಇಲ್ಲದ ಈ ತರಹದ ಸಾಕಷ್ಟು ಅದ್ಭುತಗಳ ಬಗ್ಗೆ ಈಗಾಗಲೇ ತಿಳಿದಿರಬಹುದು. ಇದೇ ತರಹ, ದೇವರು ಮನಸ್ಸುಮಾಡಿದರೆ ಏನುಬೇಕಾದರೂ ಮಾಡಬಲ್ಲರು. ದೇವರು ತಮ್ಮಿಚ್ಚೆಯಂತೆ ಕಾರ್ಯನಡೆಸಲು ಮಾನವ ದಲ್ಲಾಳಿಯ ಅವಶ್ಯಕತೆ ಇಲ್ಲವೇಇಲ್ಲ.

ಈಗ, "ನಿಮ್ಮ ಮುಕ್ತಮನದ-ಆಲೋಚನೆಯನ್ನು"  ಹೀಗೆಯೆ ಸಕ್ರೀಯವಾಗಿಟ್ಟು, ನನ್ನ ಮುಂದಿನ ಅಂಶಕ್ಕೆ ಹೋಗುತ್ತೇನೆ...

ಒಂದು ಅತೀ ಸರಳ / ಮೂಲ ಉದಾಹರಣೆಗಾಗಿ, ಹೀಗೊಂದು ಸಂದರ್ಭ ಎದುರಾಗುತ್ತದೆ ಎಂದು ಭಾವಿಸಿ:
ನಮ್ಮ ಭಾರತದ ಸರ್ಕಾರ "ಕಾಶ್ಮೀರವು ಭಾರತ ದೇಶದ ಅವಿಭಾಜ್ಯ ಅಂಗ (ನಿಜಸ್ಥಿತಿಯಲ್ಲಿರುವಂತೆ)" ಎಂದು ಹೇಳುತ್ತದೆ.
ನಂತರ, ಪೋಪ್ "ಈ ಮೂಲಕ ನಾನು ಪ್ರಪಂಚದ ಎಲ್ಲ ಕ್ರೈಸ್ತರಿಗೆ ಹೇಳುವುದೇನೆಂದರೆ, ತಾವೆಲ್ಲರು ಜಮ್ಮು ಮತ್ತು ಕಾಶ್ಮೀರದ ಪ್ರಜೆಗಳಿಗಾಗಿ ಪ್ರಾರ್ಥಿಸಿ. ಆ ಜನತೆ ದಶಕಗಳಿಂದ ಹಾತೊರೆಯುತ್ತಿರುವ ಸ್ವಾತಂತ್ರ್ಯವನ್ನು ಅವರಿಗೆ ದೇವರು ನೀಡಲಿ. ಮತ್ತು ಅಂತಹ ಒಳ್ಳೆಯ ಮನವನ್ನು ಭಾರತ ಮತ್ತು ಪಾಕಿಸ್ತಾನಗಳ ಸರ್ಕಾರಗಳಿಗೆ ನೀಡಲಿ. ಯೇಸುಸ್ವಾಮಿಯ ಪೂಜ್ಯನಾಮದಲ್ಲಿ ಪ್ರಾರ್ಥಿಸೋಣ! (ಇದೇರೀತಿ ಅಲ್ಲವೇ ವ್ಯಾಟಿಕನ್ ಯೇಸುವಿನ ಪೂಜ್ಯನಾಮದ ದುರ್ಬಳಕೆಯನ್ನು ತನ್ನ ಮನಬಂದಂತೆ ಮಾಡುತ್ತಾ ಬಂದಿರುವುದು)" ಎನ್ನುತ್ತಾ ಒಂದು ತೆರೆದ ಹೇಳಿಕೆ ನೀಡುತ್ತಾನೆ.

ಈ ತರಹದ ಘಟನೆ ಸಂಭವಿಸಿದಾಗ ಭಾರತೀಯರಾಗಿ ನಾವು ಯಾರನ್ನು ಬೆಂಬಲಿಸುತ್ತೇವೆ? ನಮ್ಮದೇ ರಾಷ್ಟ್ರದ ಸರ್ಕಾರವನ್ನೋ ಅಥವಾ ಪರದೇಶಿ ರಾಜನನ್ನೊ?

              ಸಹಜವಾಗಿಯೇ ನಾವು ನಮ್ಮ ರಾಷ್ಟ್ರದ ಪರ ನಿಲ್ಲುತ್ತೇವೆ. ಇದರಿಂದ ಸಾಬೀತಾಗುವುದೇನೆಂದರೆ "ನಾವು ಪರದೇಶಿ ರಾಜನೊಬ್ಬನ ಬದಲಿಗೆ ನಮ್ಮ ರಾಷ್ಟ್ರವನ್ನು ಪ್ರೀತಿಸುತ್ತೇವೆ".

              ಭಾರತವು ಒಂದು ಸ್ವತಂತ್ರ ರಾಷ್ಟ್ರ. ಅದರರ್ಥ ನಾವೆಲ್ಲ ಸ್ವತಂತ್ರರು ಎಂಬುದೆ. ಆದರೆ, ಪ್ರಾಯೋಗಿಕ ಆಧಾರದ ಮೇಲೆ, ವ್ಯಾಟಿಕನ್ ದೇಶದ ಅರಸ ನಮ್ಮನ್ನು (ಕಥೊಲಿಕರನ್ನು / ಕ್ರೈಸ್ತರನ್ನು) ಈಗಲೂ ಆಳುತ್ತಿದ್ದಾನೆ. ಇದು ಸಹಜವಾಗಿಯೇ, "ನಮ್ಮ ರಾಷ್ಟ್ರದ ಪ್ರಜೆಗಳನ್ನು ನಿರ್ವಹಿಸುವ ಅಧಿಕಾರ ನಮ್ಮ ದೇಶದ ಪ್ರಜೆಗಳಿಂದ ಚುನಾಯಿತವಾಗಿರುವ ಸರ್ಕಾರಕ್ಕಷ್ಟೇ ಇರುತ್ತದೆ" ಎನ್ನುವ ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ. ಯಾವುದೇ ಪರದೇಶಗಳ ರಾಜ / ರಾಣಿ ನಮ್ಮ ಜನರ ಮೇಲೆ ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಹಿಡಿತ ಸಾಧಿಸುವಂತಿಲ್ಲ. ಒಂದುವೇಳೆ ಯಾವುದೇ ಪರದೇಶಿ ರಾಜ / ರಾಣಿ ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಮೌಲಗಳನ್ನು ಬದಿಗೊತ್ತಿ, ನಮ್ಮ ಪ್ರಜೆಗಳಮೇಲೆ ಪ್ರತ್ಯಕ್ಷ / ಪರೋಕ್ಷ ಹಿಡಿತವನ್ನು ಸಾಧಿಸಲು ಯತ್ನಿಸಿದರೆ ಅದು ಸಹಜವಾಗಿಯೇ ಭಾರತವೆಂಬ ಸುಸ್ಥಾಪಿತ ರಾಷ್ಟ್ರದಲ್ಲಿ ಸಮಾಜವನ್ನು ಒಡೆಯಲು ಯತ್ನಿಸುವಂತಹ ಶಿಕ್ಷಾರ್ಹ ಅಪರಾಧವಾಗುತ್ತದೆ.

              ನಾವು ನಮ್ಮದೇ ಮುಖ್ಯಗುರುವನ್ನು ಹೊಂದಿದ್ದರೆ ಎಷ್ಟು ಚೆನ್ನಾಗಿರುತ್ತದೆ! ಇಲ್ಲ, ಭಾರತೀಯ ಗುರುವೊಬ್ಬ ಪೋಪ್ ಆಗಲಿ ಎಂದು ಹೇಳುತ್ತಿಲ್ಲ. ನಾವು ಕ್ರೈಸ್ತರಾಗಿದ್ದು/ಕಥೊಲಿಕರಾಗಿದ್ದು, ವಿದೇಶಿ ಮಧ್ಯಸ್ಥಿಕೆ ಇಲ್ಲದೆ ಸ್ವತಂತ್ರವಾಗಿ ಜೀವನ ನಡೆಸಬೇಕೆಂಬುದೇ ನನ್ನಾಸೆ.

              ನಮಗೆ ನಮ್ಮ ಗುರುಗಳಲ್ಲಿ ಮತ್ತು ಕನ್ಯಾಸ್ತ್ರೀಯರಲ್ಲಿ ನಂಬಿಕೆಯಿರಬೇಕು. ನಮ್ಮ ಭಾರತೀಯ ಶೈಲಿಯಲ್ಲಿಯೇ ನಮ್ಮ ಮಕ್ಕಳಿಗೆಲ್ಲ ಒಳ್ಳೆಯ ಜೀವನದ ಬಗ್ಗೆ ಬೋಧನೆಮಾಡಲು ಅವರಿಗೆ ಸ್ಥೈರ್ಯ ಸಿಗಲು, ನಾವು ನಮ್ಮ ಗುರುಗಳು ಮತ್ತು ಕನ್ಯಾಸ್ತ್ರೀಯರನ್ನು ನಮ್ಮದೇ ಕುಟುಂಬಗಳ ಸದಸ್ಯರಂತೆ ಪರಿಗಣಿಸಿ, ಅವರ ಶ್ರಮವನ್ನು ಬೆಂಬಲಿಸಬೇಕು. ಅವಿರತ ಪರಿಶ್ರಮದ ಕಾರ್ಯಗಳ ಮೂಲಕ ತಾವು ಭಾರತೀಯ ಕ್ರೈಸ್ತ / ಕಥೊಲಿಕ (ಬಹುದೊಡ್ಡ ವೈವಿಧ್ಯಮಯ) ಸಭೆಯನ್ನು ಮುನ್ನಡೆಸಿಕೊಂಡು ಹೋಗಲು ಶಕ್ತರು ಎಂದು ಇಡೀ ಪ್ರಪಂಚದೆದುರು ನಮ್ಮ ಗುರುಗಳು & ಕನ್ಯಾಸ್ತ್ರೀಯರು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ನಾವು "ವಿದೇಶಿ ಹಿಡಿತ ಮತ್ತು ಸ್ವದೇಶಿ ಸ್ವಾತಂತ್ರ್ಯ" ಇವೆರೆಡರ ಮಧ್ಯೆ ಇರುವ ಭಿನ್ನತೆಯನ್ನು ಅರಿಯಲು ಶಕ್ತರಾಗಿರಬೇಕು. ಒಂದು ಬಹುದೊಡ್ಡ ವೈವಿಧ್ಯಮಯ ಸಮಾಜವಾಗಿ ನಾವು ಈ ಪ್ರಪಂಚಕ್ಕೆ ರೆವರೆಂಡ್ ಮಸ್ಕರೆನ್ಹಸ್, ಸಂತ ಅಲ್ಫೋನ್ಸಾ ರಂತಹ ಎಷ್ಟೋ ಅತ್ಯುತ್ತಮ ಗುರುಗಳನ್ನು, ಕನ್ಯಾಸ್ತ್ರೀಯರನ್ನು ನೀಡಿದ್ದೇವೆ. ಇಂತಹ ಎಷ್ಟೋ ಅದ್ಭುತ ಸಾಧನೆಗಳೊಂದಿಗೆ, ನಾವೀಗ ನಮ್ಮ ಮುಂದಿನ ಸಾಧನೆಯ ಕಡೆಗೆ ಹೆಜ್ಜೆ ಹಾಕೋಣ.

ಪರದೇಶಿ ಹಿಡಿತದಿಂದ ಸ್ವಾತಂತ್ರ್ಯ ಪಡೆಯುವತ್ತ ಮುಂದಿನ ಹೆಜ್ಜೆ.

ನಮ್ಮನ್ನು (ಭಾರತದ ಕ್ರೈಸ್ತರನ್ನು) ಮುನ್ನಡೆಸಲು, ಭಾರತೀಯ ಗುರುಗಳು ಮತ್ತು ಕನ್ಯಾಸ್ತ್ರೀಯರ (ರಾಜನಂತೆ ಪ್ರಾಬಲ್ಯ ಮೆರೆಯುವ ಒಬ್ಬನೇ ಗುರುವಲ್ಲ) ಸಭೆಯೊಂದನ್ನು ಕಟ್ಟೋಣ. ಈ ಸಭೆಯು ಒಳ್ಳೆಯ ಮಾರ್ಗದಲ್ಲಿ ಜೀವನ ನಡೆಸಲು ನಮಗೆ ದಾರಿತೋರುವಂತಾಗಲಿ. ನಾವು ನೀಡುವ ದಾನದ ಮೊತ್ತವನ್ನೆಲ್ಲ ಇದೇ ಸಭೆ, ನಮ್ಮ ದೇಶದ ಒಳಗಡೆಯೇ ನಿರ್ವಹಿಸಲಿ. ಕಠಿಣ ಸಂದರ್ಭಗಳಲ್ಲಿ ನಾವೆಲ್ಲ ಒಂದಾಗಿ ನಿಲ್ಲುವಂತೆ ಈ ಸಭೆ ನೋಡಿಕೊಳ್ಳಲಿ. ಮತ್ತು ನಮ್ಮ ಕಠಿಣ ಪರಿಸ್ಥಿತಿಗಳಲ್ಲಿ ಪರದೇಶಿಗಳು ತಮ್ಮ ಲಾಭಮಾಡುವ ಕೆಲಸಗಳನ್ನು ನಡೆಸದಂತೆ ನಮ್ಮ ಗುರುಗಳ ಈ ಸಭೆಯು ಎಚ್ಚರಿಕೆ ವಹಿಸಿ ನಮ್ಮನ್ನು ಪರಕೀಯ ಲಾಭಕೋರರ ಜಾಲದಿಂದ ರಕ್ಷಿಸಲಿ. ಈ ತರಹ ನಮ್ಮದೇ ಸಭೆಯನ್ನು ಕಟ್ಟುವುದರ ಮೂಲಕ ನಾವು ವ್ಯಾಟಿಕನ್ ದಾಸತ್ವದಿಂದ ನ್ಯಾಯವಾದ ದಾರಿಯಲ್ಲೇ ಅಧಿಕೃತವಾಗಿ ಹೊರಬರಬಹುದು. ಇದರರ್ಥ ನಾವು ಕಥೊಲಿಕ ಪದ್ಧತಿಯನ್ನೇ ಬಿಟ್ಟು ಬೇರೆ ಗುಂಪಿಗೆ ಸೇರೋಣ ಎಂದಲ್ಲ. ಬದಲಿಗೆ, ನಾವು ಭಾರತೀಯ ಕಥೊಲಿಕರಾಗಿ ನಮ್ಮದೇ ಹೊಸ ಸಭೆಯನ್ನು ಕಟ್ಟಿ, ಸ್ವತಂತ್ರವಾಗಿ ನಮ್ಮ ಭಾರತೀಯ ಕಥೊಲಿಕ ಜೀವನ ನಡೆಸೋಣ. ಈ ಮೂಲಕ ಪರಕೀಯರ ದಾಸತ್ವದಿಂದ ನಮ್ಮ ರಾಷ್ಟ್ರ ಪಡೆದ ಸ್ವಾತಂತ್ರ್ಯವನ್ನು ಭಾರತದ ಕಥೊಲಿಕರೂ ಪಡೆಯೋಣ.

ಒಳ್ಳೆಯ ಜೀವನ ನಡೆಸಲು ಪರದೇಶಿ ಸಮೀತಿಯೊಂದು ನಮ್ಮನ್ನು ಮುನ್ನಡೆಸಬಹುದು ಎಂದಾದರೆ, ನಮ್ಮದೇ ಆದ ಸ್ವದೇಶಿ ಸಭೆಯು ಕೂಡ ನಮಗೆ ಮಾರ್ಗದರ್ಶನ ನೀಡಬಹುದು

ಸ್ವಾತಂತ್ರ್ಯಕ್ಕಾಗಿ ಒಗ್ಗಟ್ಟಾಗಿ ನಿಲ್ಲೋಣ!
ಸ್ವತಂತ್ರವಾಗಿ ಬದುಕೋಣ!
ಪರದೇಶಿ ದಾಸತ್ವದಿಂದ ನಮ್ಮ ರಾಷ್ಟ್ರ ಪಡೆದ ಸ್ವಾತಂತ್ರ್ಯವನ್ನು ನಮ್ಮದಾಗಿಸಿಕೊಂಡು ಆನಂದಿಸೋಣ!