ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸಿದವರಲ್ಲಿ ಶವಣ ಭಟ್ಟಾಚಾರ ಕೂಡ ಒಬ್ಬರು. ಆದರೆ ಅವರ ತೆರೆದ ಹೃದಯ ಮತ್ತು ಮುಕ್ತ ಮನಸ್ಸು ಅವರನ್ನು ಇತರ ವಲಸಿಗರಿಂದ ಭಿನ್ನವಾಗಿಸುತ್ತವೆ. ಅವರು ಈ ದೇಶದ ವೈವಿಧ್ಯತೆಯನ್ನು ಗೌರವಿಸುವ ಮನಸ್ಸುಳ್ಳ ನಿಜ ಭಾರತೀಯ.
ಸಾಕಷ್ಟು ಜನ (ಭಾರತೀಯರಷ್ಟೇ ಅಲ್ಲ, ಬದಲಿಗೆ ಕೆಲ ವಿದೇಶಿಯರೂ ಸಹ) ಕರ್ನಾಟಕಕ್ಕೆ ವಲಸೆ ಬಂದಾಗ ಅಥವಾ ಕರ್ನಾಟಕಕ್ಕೆ ವಲಸೆ ಬರಲು ಯೋಜಿಸುತ್ತಿರುವಾಗ ಕನ್ನಡವನ್ನು ಕಲಿಯಬೇಕಾಗಿ ಬಂದಾಗ ಗೋಗರೆಯುತ್ತಾರೆ. ಅವರ ಸಾಮಾನ್ಯ ವಾದವೆಂದರೆ 'ನನಗೆ ಹಿಂದಿ ಅಥವಾ ಆಂಗ್ಲ ಬರುವಾಗ ಕನ್ನಡವನ್ನೇಕೆ ಕಲಿಯಬೇಕು' ಎಂಬುದು. ಆದರೆ ಇದೇ ಜನ ಯಾವುದೋ ಅರಿಯದ ಪರದೇಶಿ ಭಾಷೆಯನ್ನು (ಆಂಗ್ಲವನ್ನೂ ಸೇರಿಸಿ) ಕಲಿಯಲು ತಿಂಗಳು/ವರ್ಷಗಟ್ಟಲೆ ಸಮಯವನ್ನು ಕಳೆಯಲು ಯೋಚಿಸುವುದಿಲ್ಲ.
ಇದು ಕೇವಲ ಹಿಂದಿ ಮಾತನಾಡುವ ಭಾರತದ ಉತ್ತರದ ರಾಜ್ಯಗಳಿಂದ ಬರುವ ಜನರ ಬಗ್ಗೆಯಲ್ಲ, ಬದಲಿಗೆ ಕರ್ನಾಟಕಕ್ಕೆ ವಲಸೆ ಬರುವ ಪ್ರತಿಯೊಬ್ಬರ ಬಗ್ಗೆ. ಯಾರು ಕನ್ನಡ ಕಲಿಯದೇ ಗರ್ವ/ಉದ್ಧಟತನ ತೋರುತ್ತಾ ಅವರಿಲ್ಲಿ ಬಂದಾಗ ಕನ್ನಡಿಗರೇ ಅವರೊಂದಿಗೆ ಅವರ ಭಾಷೆಯಲ್ಲಿ ಅಥವಾ ಹಿಂದಿ/ಆಂಗ್ಲದಲ್ಲಿ ಮಾತನಾಡಬೇಕೆಂದು ಬಯಸುತ್ತಾರೋ ಅವರ ಬಗ್ಗೆ.
ಇದು "ತಾವು ಕರ್ನಾಟಕದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿಗೆ ನೆಲೆಸಿದ್ದರೂ ಸಹ ಕನ್ನಡ ಕಲಿಯದಿದ್ದರೆ ಪರವಾಗಿಲ್ಲ ಆದರೆ ಕನ್ನಡಿಗರು ಮಾತ್ರ ವಲಸೆ ಬಂದಿರುವ ಜನರೊಂದಿಗೆ ಕನ್ನಡದ ಬದಲಿಗೆ ಹಿಂದಿ/ಆಂಗ್ಲ/ಇತರೆ ಭಾಷೆಗಳಲ್ಲಿ ವ್ಯವಹರಿಸಬೇಕೆಂದು" ಬಯಸುವ ಕುಬ್ಜ ಮನಸ್ಕ ಜನರ ಬಗ್ಗೆ.
ಈ ಲೇಖನದಲ್ಲಿ ಹೇಗೆ ಒಬ್ಬ ಮುಕ್ತ ಮನಸ್ಸಿನ ವ್ಯಕ್ತಿ ಸ್ಥಳೀಯ ಜನ-ಜೀವನವನ್ನು ಪ್ರಶ್ನಿಸದೇ ಕನ್ನಡಿಗ ಸಮುದಾಯದಲ್ಲಿ ಬೆರೆತು ಒಂದಾಗಬಹುದು ಎಂಬುದನ್ನು ನೀವು ತಿಳಿಯಬಹುದು.
ಶವಣ ಭಟ್ಟಾಚಾರ ಅವರ ಬಂಗಾಳಿ ಕುಟುಂಬ ಸುಮಾರು ೪೬ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆಬಂದಿರುತ್ತದೆ ಮತ್ತು ಇವರು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುತ್ತಾರೆ.
"ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ?" ಎಂದು ಜನ ಅವರನ್ನು ಕೇಳಿದಾಗ ಅವರಿಂದ ಬಂದ ಉತ್ತರ ಅದ್ಭುತವಾದದ್ದು. ಇಂತಹ ಉತ್ತರ ಕೇವಲ ಮುಕ್ತ ಮನದ ಮತ್ತು ತೆರೆದ ಹೃದಯದ ವ್ಯಕ್ತಿಗಳು ಮಾತ್ರ ನೀಡಬಲ್ಲರು. ಶವಣ ಭಟ್ಟಾಚಾರರ ಉತ್ತರವನ್ನು ಅವರ ಮಾತುಗಳಲ್ಲಿಯೇ ಮುಂದೆ ಓದಿ...
ಕೆಲ ವರ್ಷಗಳ ಹಿಂದೆ ನನಗೆ ಆಸ್ಟ್ರಿಯಾದಿಂದ ಕೆಲಸದ ಆಹ್ವಾನವೊಂದು ದೊರಕಿತು ಮತ್ತು ನಾನದನ್ನು ಎರಡು ಯೋಚಿಸದೆ ಬಾಚಿಕೊಂಡೆ (ಆದರೆ ಖಂಡಿತವಾಗಿ ಅದರಿಂದ ಸಿಗುವ ಲಾಭಗಳನ್ನು ನೋಡಿದಮೇಲೆ). ನಾನು ಅಲ್ಲಿ ಹೋಗಿ ಇಳಿದಮೇಲೆ ನಾನು ವಾಸಿಸುವ ನಗರದ ಜಿಲ್ಲಾ ಕಚೇರಿಗೆ ಹೋಗಿ ನನ್ನ ವಾಸದ ಅನುಮತಿ ಪತ್ರವನ್ನು ಪಡೆದುಕೊಳ್ಳುವಂತೆ ನನಗೆ ತಿಳಿಸಲಾಯಿತು.
ನಾನು ವಾಸದ ಅನುಮತಿ ಪತ್ರವನ್ನು ಪಡೆಯಲು ಜಿಲ್ಲಾ ಕಚೇರಿಗೆ ಹೋದಾಗ ಅಲ್ಲಿ ನನಗೆ ವಾಸದ ಅನುಮತಿಯನ್ನು ಎರಡು ವರ್ಷಗಳ ನಂತರ ಮುಂದುವರಿಸಲು ಜರ್ಮನ್ ಭಾಷೆಯ ಕನಿಷ್ಠ ಹಂತ "ಅ೨" ರವರೆಗೆ ಪ್ರಮಾಣಪತ್ರವನ್ನು ಪಡೆಯಬೇಕೆಂದು ಸೂಚಿಸಲಾಯಿತು. ನನ್ನ ಪತ್ನಿಗೆ ಇದು ಹಂತ "ಬ೨" ರವರೆಗೆ ಕಡ್ಡಾಯ. ಆದ್ದರಿಂದ ನಾವಿಬ್ಬರೂ ಜರ್ಮನ್ ಭಾಷೆ ಕಲಿಯಲು ತರಗತಿಯೊಂದನ್ನು ಸೇರಿಕೊಂಡೆವು. ವಾರಕ್ಕೆ ೩ ದಿನಗಳಂತೆ ಮುಂದಿನ ೧೪ ತಿಂಗಳುಗಳ ಕಾಲ ನಾವಿಬ್ಬರೂ ತಪ್ಪದೇ ಜರ್ಮನ್ ಭಾಷೆಯ ತರಗತಿಗೆ ಹಾಜರಾದೆವು ಮತ್ತು ಆ ಭಾಷೆಯಲ್ಲಿ ಹಿಡಿತ ಸಾಧಿಸಿದೆವು. ನಾವು ಸಾಕಷ್ಟು ಸ್ಥಳೀಯ ಜನರೊಂದಿಗೆ ಸ್ನೇಹ ಬೆಳೆಸಿಕೊಂಡೆವು ಮತ್ತು ಅವರೊಂದಿಗೆ ಇನ್ನೂ ಸಂಪರ್ಕದಲ್ಲಿದ್ದೇವೆ. ಅವರ ಸಂಸ್ಕೃತಿಯ ಬಗ್ಗೆ ಕಲಿತುಕೊಂಡೆವು, ಇವೆಲ್ಲವುಗಳಿಂದ ನಾವು ಸ್ಥಳೀಯ ಜನರಲ್ಲಿ ವಿಶ್ವಾಸ ಮತ್ತು ಗೌರವವನ್ನು ಪಡೆದೆವು ಏಕೆಂದರೆ ಆ ಪ್ರದೇಶದಲ್ಲಿ ವಾಸವಾಗಿದ್ದ ವಿದೇಶಿಗರೆಂದರೆ ನಾವಷ್ಟೇ ಆಗಿದ್ದೆವು.
ಆಸ್ಟ್ರಿಯಾದಲ್ಲಿನ ನಮ್ಮ ಜೀವನದ ಬಗ್ಗೆ ಇಲ್ಲಿ ತಿಳಿಸಲು ಮುಖ್ಯ ಕಾರಣ ನಮ್ಮ ಆಸ್ಟ್ರಿಯಾದಲ್ಲಿನ ಜೀವನ ಹಾಗು ಇಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರುವ ಜನರ ಜೀವನಗಳ ಮಧ್ಯೆ ಸರಿತೂಕ ಮಾಡಲು.
ಜರ್ಮನ್ ಭಾಷೆಯನ್ನು ನನ್ನ ಮೇಲೆ ಒಂದು ವಿಧದಲ್ಲಿ ಹೇರಲಾಗಿತ್ತು. ಹೆಚ್ಚಿನ ಕಾಲ ಅಲ್ಲಿ ನೆಲೆಸುವ ಆಸೆ ಮತ್ತು ಒಳ್ಳೆಯ ಜೀವನ ನನ್ನನ್ನು ಆ ಭಾಷೆಯನ್ನು ಕಲಿಯುವಂತೆ ಒತ್ತಾಯಪಡಿಸಿತು. ಆದರೆ ನಾನು ಆ ಭಾಷೆಯನ್ನು ಕಲಿತ ಮೇಲೆ ಅದರಿಂದ ಹೆಚ್ಚಿನ ಸದುಪಯೋಗ ಪಡೆದುಕೊಂಡೆ. ನನಗೆ ಯಾವುದೇ ಅಹಿತಕರ ಘಟನೆಯಿಂದ ಪಾರಾಗಲು ಅದರಿಂದ ಸರಳವಾಯಿತು. ಅಲ್ಲಿಯ ಹಳ್ಳಿಗಳ ಪಬ್, ದಿನಸಿ ಅಂಗಡಿಗಳು ಮತ್ತಿತರೆ ಜಾಗಗಳಲ್ಲಿ ನನ್ನನ್ನು ಸ್ಥಳೀಯ ಜನರಿಗೆ ಸಮಾನವಾಗಿಯೇ ಪರಿಗಣಿಸಲಾಗುತ್ತಿತ್ತು. ಇದೆಲ್ಲಾ ಸಾಧ್ಯವಾಗಿದ್ದು ನಾನು ಅವರ ಜರ್ಮನ್ ಭಾಷೆಯನ್ನು ಕಲಿಯುವುದರ ಮೂಲಕ ಅವರನ್ನು ಗೌರವಿಸಿದ್ದರಿಂದ.
ಇದು ಕೇವಲ ನನ್ನ ಜೀವನದ ನೈಜ ಉದಾಹರಣೆ ಆದರೆ ಖಂಡಿತಾ ಸಾಕಷ್ಟು ಜನ ಜರ್ಮನಿ ಮತ್ತು ಆಸ್ಟ್ರಿಯಾಗಳಲ್ಲಿ ಇದೇ ತರಹದ ಅನುಭವವನ್ನು ಹೊಂದಿರುತ್ತಾರೆ.
ಈಗ ಉದ್ಭವಿಸುವ ಪ್ರಶ್ನೆಯೆಂದರೆ ಒತ್ತಡ ಅಥವಾ ಸ್ವಂತ ಆಸಕ್ತಿಯ ಮೇರೆಗೆ ಭಾರತೀಯರಾದ ನಾವು ಪರದೇಶಗಳ ಭಾಷೆಗಳನ್ನು ಕಲಿಯುತ್ತೇವೆ ಎಂದಾದರೆ, ಅದೇ ಕಾರಣಕ್ಕೆ ನಾವೇಕೆ ಭಾರತದ ಭಾಷೆಗಳನ್ನು ಕಲಿಯುವುದಿಲ್ಲ? ಪರದೇಶಗಳು ಅವರ ಭಾಷೆಗಳನ್ನು ಹೇರುವಾಗ ಸುಮ್ಮನಿರುವ ನಾವು ನಮ್ಮದೇ ದೇಶದ ರಾಜ್ಯಗಳು ಅವರವರ ಭಾಷೆಗಳನ್ನು ವಲಸೆ ಬರುವವರ ಮೇಲೆ ಹೇರಿದರೆ ಏಕೆ ಸುಖಾಸುಮ್ಮನೆ ಗದ್ದಲ ಮಾಡುತ್ತೇವೆ? ನಮ್ಮ ಈ ಕುಬ್ಜ ಮನಸ್ಥಿತಿಯೇ ಸ್ಥಳೀಯ ಜನ ನಮ್ಮನ್ನು ಪ್ರಶ್ನೆಮಾಡುವಂತೆ ಮಾಡುತ್ತವೆ.
ನಾವು ಜರ್ಮನ್, ಸ್ಪ್ಯಾನಿಶ್, ಇಟಾಲಿಯನ್ ಅಥವಾ ಇತರ ಭಾಷೆಗಳನ್ನು ಕಲಿಯಲು ತಕರಾರು ಮಾಡುವುದಿಲ್ಲ ಏಕೆಂದರೆ ಅವುಗಳು ನಮ್ಮ ಪ್ರಕಾರ ಮುಖ್ಯವಾದವುಗಳು, ಆದರೆ ಅದೇ ಕನ್ನಡ ಅಥವಾ ಭಾರತದ ಮತ್ತಿತರೇ ಸ್ಥಳೀಯ ಭಾಷೆಗಳು ನಮ್ಮ ಪ್ರಕಾರ ಮುಖ್ಯವಾದವುಗಳಲ್ಲ. ಇದೆಲ್ಲಾ ಕೇವಲ ನಮ್ಮ ಮನಸ್ಥಿತಿಗೆ ಬಂದು ನಿಲ್ಲುತ್ತದೆಯಷ್ಟೆ.
ಕೇವಲ ಕನ್ನಡವೊಂದೇ ಅಲ್ಲ ಒಬ್ಬ ವ್ಯಕ್ತಿ ಭಾರತದಲ್ಲಿ ತಾನು ವಲಸೆಹೋಗಿ ನೆಲೆಸಲು ಆಯ್ಕೆಮಾಡುವ ಜಾಗದ ಸ್ಥಳೀಯ ಭಾಷೆಯ ಬಗ್ಗೆ ಕನಿಷ್ಟ ಜ್ಞಾನ ಹೊಂದುವುದು ಅತ್ಯವಶ್ಯಕ. ಹೀಗೆ ಕನ್ನಡ ಭಾಷೆಯನ್ನು ಕಲಿಯುವುದರಿಂದ ನಮಗೆ ಆಗುವ ಹಾನಿಯಂತೂ ಏನೂ ಇಲ್ಲ ಆದರೆ ಇದರಿಂದ ನಾವು ಸ್ಥಳೀಯ ಜನರಿಗೆ ಹತ್ತಿರವಾಗಿ ಅವರ ಜೀವನಶೈಲಿಯನ್ನು ಗೌರವಿಸುತ್ತೇವೆ ಎಂಬ ಸಂದೇಶವನ್ನು ನೀಡಿದಂತಾಗುತ್ತದೆ.
ತುಂಬಾ ಒಳ್ಳೆಯ ವಿವರಣೆ ಅಲ್ಲವೇ?! ನೀವು ಭಾರತದಲ್ಲಿ ನಿಮ್ಮ ಜೀವನವನ್ನು ಕೇವಲ ಒಂದೊಳ್ಳೆಯ ಮುಕ್ತ ಮನಸ್ಸು ಮತ್ತು ತೆರೆದ ಹೃದಯ ಹೊಂದಿದಾಗ ಮಾತ್ರ ಸಂತೋಷದಿಂದ ಜೀವಿಸುತ್ತೀರಿ. ನೀವು ಒಂದುವೇಳೆ ಪರಿಮಿತಿಗಳನ್ನು ಹೊಂದಿದ್ದರೆ ಗೋಗರೆಯುತ್ತಾ ಜೀವನ ತಳ್ಳುತ್ತೀರಿ ಅಷ್ಟೆ.
ಭಾರತದ ವೈವಿಧ್ಯತೆ ಮತ್ತು ಕನ್ನಡದ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಇಲ್ಲಿ ನಮಗೆ ತಿಳಿಸಿ.
ಉಲ್ಲೇಖಗಳು/ಹೆಚ್ಚಿನ ಮಾಹಿತಿ:
೧. ಅಂತರ್ಜಾಲದಲ್ಲಿ ಕನ್ನಡವನ್ನು ಕಲಿಯಿರಿ:
https://kannadabaruthe.com/
೨. ಒಂದುವೇಳೆ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಘೋಷಿಸಿದರೆ ತಮಿಳರು ಅದನ್ನು ಕಲಿಯುವರೆ?:
https://www.quora.com/If-Hindi-is-declared-the-national-language-of-India-will-Tamils-learn-it/answer/Nelson-Philipangel?share=3474aa16&srid=tdmA
೩. ಹೊರಗಿನವರ ಮೇಲೆ ಕರ್ನಾಟಕ ಏಕೆ ಕನ್ನಡವನ್ನು ಹೇರುತ್ತಿದೆ? ಶವಣ ಭಟ್ಟಾಚಾರರಿಂದ ಒಂದು ಉತ್ತರ:
https://www.quora.com/Why-is-Karnataka-imposing-Kannada-on-outsiders/answer/Shavan-Bhattacharjee-1?ch=3&share=a1cc6cfb&srid=tdmA