ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಸರಿಪಡಿಸಲು ಅಥವಾ ಬದಲಿಸಲು ಗೆಜೆಟ್ ಪ್ರತಿ ಒಂದಿದ್ದರೆ ಅಷ್ಟೇ ಸಾಕು :) ಹೌದು, ಆಧಾರ್ ಕಾರ್ಡಿನಲ್ಲಿ ಹೆಸರು ಬದಲಿಸುವುದು ತುಂಬಾ ಸರಳ ವಿಧಾನ (ಡಿಜಿಟಲ್ ಭಾರತಕ್ಕೆ ವಂದನೆಗಳು!). ನಿಮ್ಮ ಬಳಿ ಗೆಜೆಟ್ ಪ್ರತಿ ಇಲ್ಲ, ಆದರೆ ಕೇವಲ ದಿನಪತ್ರಿಕೆಯ ಮುದ್ರಿತ ಪ್ರತಿಗಳು ಇವೆ ಎಂದಾದರೆ, ನೀವು ಮೊದಲು ಕೆಳಗೆ ಪಟ್ಟಿಮಾಡಿರುವ ಗುರುತಿನ ಚೀಟಿಗಳಲ್ಲಿ ಒಂದರಲ್ಲಿ ನಿಮ್ಮ ಹೆಸರನ್ನು ಸರಿಪಡಿಸಿ ಆನಂತರ ಸರಿಪಡಿಸಿದ ಆ ಗುರುತಿನ ಚೀಟಿಯನ್ನು ಬಳಸಿ ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಬದಲಿಸಬಹುದು.
- ಪಾಸ್ಪೋರ್ಟ್
- ಪ್ಯಾನ್ ಕಾರ್ಡ್
- ಪಡಿತರ/ಪೀಡಿಎಸ್ ಭಾವಚಿತ್ರದ ಕಾರ್ಡ್
- ಮತದಾರರ ಗುರುತಿನ ಚೀಟಿ
- ಚಾಲನಾ ಪರವಾನಿಗೆ
- ಭಾವಚಿತ್ರವಿರುವ ಸರ್ಕಾರಿ ಐಡಿಗಳು/ ಸಾರ್ವಜನಿಕ ವಲಯದ ಸಂಸ್ಥೆಗಳು ನೀಡಿದ ಸೇವಾ ಪ್ರಮಾಣಪತ್ರಗಳು
- ನರೆಗಾ ಕೆಲಸದ ಚೀಟಿ
- ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ನೀಡಿದ ಭಾವಚಿತ್ರವಿರುವ ಚೀಟಿ
- ಶಸ್ತ್ರಾಸ್ತ್ರ ಪರವಾನಗಿ
- ಭಾವಚಿತ್ರವಿರುವ ಬ್ಯಾಂಕ್ ಎಟಿಎಂ ಕಾರ್ಡ್
- ಭಾವಚಿತ್ರವಿರುವ ಕ್ರೆಡಿಟ್ ಕಾರ್ಡ್
- ಭಾವಚಿತ್ರವಿರುವ ಪಿಂಚಣಿದಾರರ ಚೀಟಿ
- ಭಾವಚಿತ್ರವಿರುವ ಸ್ವಾತಂತ್ರ್ಯ ಹೋರಾಟಗಾರರ ಚೀಟಿ
- ಭಾವಚಿತ್ರವಿರುವ ರೈತರ ಠೇವಣಿ ಪುಸ್ತಕ
- ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಗುರುತಿನ ಚೀಟಿ
- ಮಾಜಿ ಸೈನಿಕರಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಗುರುತಿನ ಚೀಟಿ
- ಅಂಚೆ ಇಲಾಖೆ ನೀಡಿದ, ಭಾವಚಿತ್ರವಿರುವ ವಿಳಾಸ ಪತ್ರ
- ಭಾವಚಿತ್ರವಿರುವ, ತಹಶೀಲ್ದಾರ್ ಅಥವಾ ಗೆಜೆಟೆಡ್ ಅಧಿಕಾರಿ ನೀಡಿದ ಶಿರೋನಾಮೆಯ ಗುರುತಿನ ಪತ್ರ
- ಅಂಗವೈಕಲ್ಯತೆಯ ಚೀಟಿ ಅಥವಾ ಸಂಬಂಧಪಟ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರ ನೀಡಿದ ಅಂಗವೈಕಲ್ಯತೆಯ ವೈದ್ಯಕೀಯ ಪತ್ರ
- ಮಾನ್ಯತೆ ಹೊಂದಿದ ಅನಾಥಾಶ್ರಮ, ವಸತಿಗೃಹ ಇತ್ಯಾದಿಯ ಅಧೀಕ್ಷಕರು/ ಮೇಲ್ವಿಚಾರಕ/ ಸಂಸ್ಥೆಯ ಮುಖ್ಯಸ್ಥರು ನೀಡಿದ ಅಧಿಕೃತ ಶಿರೋನಾಮೆಯ ಗುರುತಿನ ಪತ್ರ
- ಎಂಪಿ/ ಎಂಎಲ್ಎ/ ಎಂಎಲ್ಸಿ/ ಪುರಸಭೆ ಸದಸ್ಯ ನೀಡಿದ ಭಾವಚಿತ್ರವಿರುವ, ಶಿರೋನಾಮೆಯ ಗುರುತಿನ ಪತ್ರ
- ಗ್ರಾಮೀಣ ಪಂಚಾಯಿತಿ ಅಧ್ಯಕ್ಷ ನೀಡಿದ ಭಾವಚಿತ್ರವಿರುವ, ಶಿರೋನಾಮೆಯ ಗುರುತಿನ ಪತ್ರ
- ಹೆಸರು ಬದಲಾವಣೆ ಮುದ್ರಿತವಾಗಿರುವ ಗೆಜೆಟ್ ಪ್ರತಿ
- ಭಾವಚಿತ್ರವಿರುವ ಮದುವೆ ಪ್ರಮಾಣಪತ್ರ
- ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ಗುರುತಿನ ಚೀಟಿ
- ಅಭ್ಯರ್ಥಿಯ ಭಾವಚಿತ್ರವಿರುವ ಎಸ್.ಎಸ್.ಎಲ್.ಸಿಯ ಪುಸ್ತಕ
- ಭಾವಚಿತ್ರವಿರುವ ಹಿಂದುಳಿದ ವರ್ಗ/ಪಂಗಡದ ಪತ್ರ
- ಹೆಸರು ಮತ್ತು ಭಾವಚಿತ್ರವಿರುವ ಶಾಲೆ ಬಿಟ್ಟ/ಬದಲಿಸಿದ ಪ್ರಮಾಣ ಪತ್ರ
- ಶಾಲಾ ಮುಖ್ಯಸ್ಥರಿಂದ ಕೊಡಮಾಡಿದ, ಹೆಸರು ಮತ್ತು ಭಾವಚಿತ್ರವಿರುವ ಶಾಲಾ ದಾಖಲೆಗಳು
- ಹೆಸರು ಮತ್ತು ಭಾವಚಿತ್ರವಿರುವ ಬ್ಯಾಂಕ್ ಪಾಸ್ಬುಕ್
- ಮಾನ್ಯತೆ ಹೊಂದಿದ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ರುಜುವಾತಾಗಿರುವ ಹೆಸರು ಮತ್ತು ಭಾವಚಿತ್ರವಿರುವ ಗುರುತಿನ ಪತ್ರ
ಆದರೆ, ನನ್ನ ಸ್ವಂತ ಅನುಭವದ ಪ್ರಕಾರ, ಹೆಸರು ಬದಲಿಸುವಾಗ/ಸರಿಪಡಿಸುವಾಗ ಗೆಜೆಟ್ ಪ್ರತಿಯನ್ನು ಮುದ್ರಿಸಿಕೊಂಡು, ಮೊದಲು ಆಧಾರ್ ಕಾರ್ಡಿನಲ್ಲಿ ಹೆಸರನ್ನು ಸರಿಪಡಿಸಿ ಆ ನಂತರ ಬೇರೆ ದಾಖಲೆಗಳನ್ನು ಸರಿಪಡಿಸುವುದು ಸರಳ. ಏಕೆಂದರೆ ಸಾಮಾನ್ಯವಾಗಿ ಬೇರೆಲ್ಲಾ ದಾಖಲೆಗಳನ್ನು ಆಧಾರ್ ಕಾರ್ಡಿನ ಆಧಾರದ ಮೇಲೆ ಅತೀ ಸುಲಭವಾಗಿ ಸರಿಪಡಿಸಬಹುದು.
ನಿಮ್ಮ ಹೆಸರು ಬದಲಾವಣೆಯ/ ತಿದ್ದುಪಡಿಯ ಕೆಲಸ ಪೂರ್ಣಗೊಂಡಮೇಲೆ, ನೀವು ಆಧಾರ್ ಕಾರ್ಡಿನಲ್ಲಿ ಹೆಸರು ಸರಿಪಡಿಸಲು ನಿಮಗೆ ಅನುಕೂಲಕರವಾದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿನೀಡಬೇಕು.
ನಿಮ್ಮ ಹತ್ತಿರದ ಅಧರ್ ನೋಂದಣಿ ಕೇಂದ್ರವನ್ನು ಇಲ್ಲಿ ಹುಡುಕಬಹುದು. ನೋಂದಣಿ ಕೇಂದ್ರದಲ್ಲಿ ನೀವು "ಆಧಾರ್ ನೋಂದಣಿ/ ನವೀಕರಿಸುವ ಅರ್ಜಿ"ಯನ್ನು ತುಂಬಿ ಮತ್ತು ಆಧಾರ್ ನವೀಕರಿಸುವ ಸೇವೆಗೆ ನಿಗದಿಪಡಿಸಿದ ಶುಲ್ಕವನ್ನು ಭರಿಸಿಬೇಕಾಗುತ್ತದೆ (~ ೫೦). ನೀವು ಶುಲ್ಕವನ್ನು ಭರಿಸಿ, ಆಧಾರ್ ನೋಂದಣಿ/ ತಿದ್ದುಪಡಿ ಅರ್ಜಿಯನ್ನು ತುಂಬಿದ ನಂತರ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಅರ್ಜಿ, ನಿಮ್ಮ ಭೌತಿಕ ಮಾಹಿತಿ & ಹೆಸರು ಬದಲಿಸಲು ನೀವು ಸಲ್ಲಿಸಿದ ಪುರಾವೆಗಳನ್ನು ಪರಿಶೀಲಿಸುತ್ತಾರೆ.
ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಅರ್ಜಿಯ ಮಾಹಿತಿಯನ್ನು ಹೆಚ್ಚಿನ ತನಿಖೆ/ಪರಿಶೀಲನೆಗೆ ಕಳುಹಿಸಿ, ನಿಮಗೊಂದು ರಸೀತಿಯನ್ನು ನೀಡುತ್ತಾರೆ. ಈ ರಸೀತಿ ಮುಖ್ಯವಾದುದು. ಅದರಲ್ಲಿ ತಿದ್ದುಪಡಿ ಕೋರಿಕೆಯ ಸಂಖ್ಯೆ (ಯುಆರ್ಎನ್) ಮುದ್ರಿತವಾಗಿರುತ್ತದೆ. ನಿಮ್ಮ ಅರ್ಜಿಯ ಸ್ಥಿತಿ-ಗತಿಯನ್ನು ತಿಳಿಯಲು ಈ ಯುಆರ್ಎನ್ ಬೇಕು. ನಿಮ್ಮ ಅರ್ಜಿ ಸ್ವೀಕೃತಗೊಂಡ ನಂತರ ೩-೫ ದಿನಗಳಲ್ಲಿ ನಿಮ್ಮ ಹೆಸರು ಆಧಾರ್ ಕಾರ್ಡಿನಲ್ಲಿ ಬದಲಾಗಿರುತ್ತದೆ (ಅಧಿಕೃತವಾಗಿ ಸುಮಾರು ೯೦ ದಿನಗಳು ಬೇಕೆಂದು ಹೇಳುತ್ತಾರೆ ಆದರೂ ಆಧಾರ್ ಇಲಾಖೆಯ ಸೇವೆಗಳು ತುಂಬಾ ವೇಗವಾಗಿವೆ).
ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರು ಬದಲಾಗಿದೆಯೋ ಇಲ್ಲವೊ ಎಂದು ತಿಳಿಯಲು ನೀವು ಆಧಾರ್ನೊಂದಿಗೆ ನೋಂದಾಯಿಸಿದ ಮಿಂಚಂಚೆ ಅಥವಾ ಆಧಾರ್ನ ತಾಣದಲ್ಲಿ ತಿಳಿಯಬಹುದು.
ಪರಿಶೀಲನೆಗೆ ಬೇಕಾಗುವ ಮಾನ್ಯತೆ ಹೊಂದಿದ ದಾಖಲೆಗಳ ಸಂಪೂರ್ಣ ಪಟ್ಟಿ
ಆಧಾರ್ ನೋಂದಣಿ/ ತಿದ್ದುಪಡಿ ಅರ್ಜಿ (ಆವೃತ್ತಿ_೨.೧)
ನವೀಕೃತ ಅರ್ಜಿಯನ್ನು ಪಡೆಯಲು UIDAI ತಾಣಕ್ಕೆ ಭೇಟಿನೀಡಿ
ನವೀಕೃತ ಅರ್ಜಿಯನ್ನು ಪಡೆಯಲು UIDAI ತಾಣಕ್ಕೆ ಭೇಟಿನೀಡಿ
- ☞ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ: https://ssup.uidai.gov.in/checkSSUPStatus/checkupdatestatus
- ☞ ಗೆಜೆಟ್ ಪ್ರತಿಯನ್ನು ಇಳಿಸಿ: http://egazette.nic.in/(S(orfjmbb51yligrot5tkiuzsg))/Search1.aspx
- ☞ ಡಿಜಿಟಲ್ ಭಾರತ: https://www.digitalindia.gov.in
- ☞ ನಿಮಗೆ ಸರಿಹೊಂದುವ ಆಧಾರ್ ನೋಂದಣಿ/ ತಿದ್ದುಪಡಿ ಕೇಂದ್ರವನ್ನು ಹುಡುಕಿ: https://appointments.uidai.gov.in/easearch.aspx
- ☞ ಆಧಾರ್ ನೋಂದಣಿ/ ತಿದ್ದುಪಡಿ ಅರ್ಜಿಯನ್ನು ಇಳಿಸಿ (೨.೧ನೇ ಆವೃತ್ತಿ): https://uidai.gov.in/images/aadhaar_enrolment_correction_form_version_2.1.pdf