ಓ ಹೊಸವರ್ಷವೇ ಕೇಳು - ಹಳತು ಹೊನ್ನು

ಓ ಹೊಸವರ್ಷವೇ ಕೇಳು ನೀನಿಲ್ಲಿ |
ನಿನಗಿದೋ ಬೇಡಿಕೆ ಈ ಹೊಸ ಆಯಾಮದಲ್ಲಿ ||

ಕನಸೆಂಬ ಹೊತ್ತಿಗೆಗೆ ಆಗು ನೀ ಅಭಿಸಾರಿಕೆ |
ಮನಸೆಂಬ ಮಹಲಿಗೆ ಕೊಡು ನಲ್ಮೆಯ ಕಾಣಿಕೆ ||


ಹಸಿದವರ ಉದರಕೆ ನೀನಾಗು ಮಮತೆಯ ಕೈ ತುತ್ತು |
ಸಜ್ಜನರ ಜೀವಕೆ ಎಂದೂ ತರಬೇಡ ಆಪತ್ತು ||

ನೊಂದವರ ಬಾಳಿಗೆ ತರು ನೀ ಹೊಸ ಚೈತನ್ಯ |
ಉಸಿರು ಉಸಿರಲೂ ಬೆರೆತಿರಲಿ ಒಲುಮೆ ಅನನ್ಯ ||


ಜಾತಿ ದ್ವೇಷವ ಮರೆಸಿ; ಪ್ರೀತಿ ಪರ್ವವ ಮೆರೆಸಿ ||
ಹನಿ -ಹನಿ ಕಣ್ಣೀರ ಒರೆಸು ನಗು ಮೊಗವ ತರೆಸಿ ||

ಓ ಹೊಸವರ್ಷವೇ ಕೇಳು ನೀನಿಲ್ಲಿ;
ನಿನಗಿದೋ ನನ್ನ ಬೇಡಿಕೆ ಈ ಹೊಸ ಆಯಾಮದಲ್ಲಿ!

- ತೇಜಸ್ವಿನಿ ರಾವ್     


  ನಿಮ್ಮ ಲೇಖನ ಸಲ್ಲಿಸಿ