ಹಿಂದಿ ಹೇರಿಕೆ ಬೇಡ, ಆದರೆ...! - ಹಳತು ಹೊನ್ನು


"ಹಿಂದಿ ಹೇರಿಕೆ" ಎನ್ನುವ ಪದಗಳು ಮಾಧ್ಯಮಗಳಲ್ಲಿ ಗದ್ದಲ ಮಾಡುವುದನ್ನು ನಾವು ಸಾಕಷ್ಟು ಸಲ ನೋಡಿರುತ್ತೇವೆ. ದೇಶದ ಹಲವು ರಾಜಕೀಯ ಪಕ್ಷಗಳಿಗೆ "ಹಿಂದಿ ಹೇರಿಕೆ"ಯು ಒಂದು ಪ್ರಮುಖ ರಾಜಕೀಯ ಅಸ್ತ್ರವಾಗಿದೆ. ಎಷ್ಟೋ ರಾಜಕಾರಣಿಗಳಿಗೆ ಇದು ಅಳಿವು-ಉಳಿವಿನ ಪ್ರಶ್ನೆಯಾಗಿದೆ!

"ಅವರು ಕೇವಲ ಹಿಂದಿ ಭಾಷೆಯ ವಿರುದ್ಧ ಧ್ವನಿ ಎತ್ತುವುದಾದರೆ ಅವರದು ನಿಜವಾಗಿಯೂ ಮಾತೃಭಾಷೆಯ ಮೇಲಿನ ಪ್ರೀತಿಯಲ್ಲ ಬದಲಿಗೆ ಅಧಿಕಾರ ಪಡೆಯಲು ಅವರಾಡುವ ರಾಜಕೀಯ ನಾಟಕ."
"ಅವರು ತಮ್ಮ ಮಾತೃಭಾಷೆಯ ಹೊರತಾದ ಎಲ್ಲ ಭಾಷೆಗಳ ವಿರುದ್ಧ ಧ್ವನಿ ಎತ್ತುವುದಾದರೆ ..."



ಭಾರತದ ಬಹುತೇಕ ಎಲ್ಲ ರಾಜ್ಯಗಳವರು ತಮ್ಮದಲ್ಲದ ಭಾಷೆಗಳ ಹಾವಯಿಳಿಂದ ಹೈರಾಣಾಗಿದ್ದರೂ ಸಹ, ತಮಿಳರು, ತೆಲಗು ಜನ, ಮಲಯಾಳಿಗಳು ಅಥವಾ ಇತರೆ ರಾಜ್ಯಗಳನ್ನು ಸಧ್ಯಕ್ಕೆ ಪಕ್ಕಕ್ಕಿಡೋಣ.

"ಹಿಂದಿ ಹೇರಿಕೆ" ಎನ್ನುವ ಝೇಂಕರಿಸುವ ಪದಗಳನ್ನು ಕರ್ನಾಟಕ ಮತ್ತು ಕನ್ನಡದ ದೃಷ್ಟಿಕೋನದಿಂದ ನೋಡೋಣ.

ಕನ್ನಡಿಗರ ದಿನನಿತ್ಯದ ಜೀವನದಲ್ಲಿ ಕನ್ನಡ ಭಾಷೆಯು ಎಷ್ಟು ಬಳಕೆಯಾಗುತ್ತಿದೆ?
ಇಲ್ಲ, ನಾನಿಲ್ಲಿ "ಎಷ್ಟು ಜನ ಕನ್ನಡಿಗರು ಕನ್ನಡದಲ್ಲಿ ಮಾತಾಡಬಲ್ಲರು" ಎಂದಷ್ಟೇ ಕೇಳುತ್ತಿಲ್ಲ.

ಒಂದು ಭಾಷೆಯ ಅವಶ್ಯಕತೆಗೆ ಮತ್ತದರ ಬಳಕೆಗೆ ಬೆಳಿಗ್ಗೆ ನಾವು ಕಣ್ಣುಬಿಟ್ಟ ತಕ್ಷಣದಿಂದ ಹಿಡಿದು ರಾತ್ರಿ ಮರಳಿ ನಿದ್ದೆಗೆ ಜಾರುವವರೆಗೆ ಅನೇಕ ಮಾರ್ಗಗಳಿವೆ.
ಆ ಅಸಂಖ್ಯಾತ ಅವಶ್ಯಕತೆ ಮತ್ತು ಬಳಕೆಗಳಲ್ಲಿ ಕನ್ನಡದಿಂದ ಎಷ್ಟು ಅವಶ್ಯಕತೆ ಮತ್ತು ಬಳಕೆಗಳು ಪೂರೈಸಲ್ಪಟ್ಟಿವೆ ಮತ್ತು ಕನ್ನಡೇತರ ಭಾಷೆಗಳು ಎಷ್ಟು ಅವಶ್ಯಕತೆ ಮತ್ತು ಬಳಕೆಗಳನ್ನು ತುಂಬಿಕೊಂಡಿವೆ?!


ಭಾಷಾ-ಸ್ವಾತಂತ್ಯ್ರವು ಭಾಷಾ-ಜವಾಬ್ದಾರಿಗಳೊಂದಿಗೆ ಬರುತ್ತದೆ!



ಕರ್ನಾಟಕವು ಎಷ್ಟೋ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಿಗೆ ತವರುಮನೆ ಇದ್ದಂತೆ (ಇಲ್ಲಿ ೧೦ನೇ ತರಗತಿವರೆಗೆ ಮಾತ್ರ ಪರಿಗಣಿಸಿ). ಪ್ರತಿವರ್ಷ ಲಕ್ಷಾಂತರ ಮಕ್ಕಳು ಈ ಶಿಕ್ಷಣ ಸಂಸ್ಥೆಗಳಿಂದ ಕಲಿತು ಹೊರಬರುತ್ತಾರೆ.

ಹಿಂದಿ ಮಾಧ್ಯಮದಲ್ಲಿ ಎಷ್ಟು ಮಕ್ಕಳು ಕಲಿತು ಹೊರಬರುತ್ತಾರೆ ಮತ್ತು ಆಂಗ್ಲ ಮಾಧ್ಯಮದಲ್ಲಿ ಎಷ್ಟು ಮಕ್ಕಳು ಕಲಿತು ಹೊರಬರುತ್ತಾರೆ?

ರಾಜ್ಯದ ಎಷ್ಟು ಖಾಸಗಿ ಶಾಲೆಗಳು ಮಕ್ಕಳಿಗೆ ನಿಜವಾಗಿಯೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ?

ಎಷ್ಟು ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಲು ಕಾತುರರಾಗಿದ್ದಾರೆ?


ಎಷ್ಟು ಜನ ಕನ್ನಡಿಗರು ವಿದ್ಯುತ್ ಉಪಕರಣಗಳನ್ನು (ಗ್ಯಾಜೆಟ್ಗಳನ್ನು) (ನಿಸ್ತಂತು/ಮೊಬೈಲು, ಲ್ಯಾಪ್ಟಾಪ್, ಟಿ‌ವಿ, ಅಲೆಕ್ಸಾ, ಸಿರಿ, ಕೊರ್ಟಾನಾಗಳಂತಹ ಡಿಜಿಟಲ್ ಸಹಾಯಕರನ್ನು) ಬಳಸುತ್ತಾರೆ?

ಅರ್ಧಕ್ಕಿಂತ ಹೆಚ್ಚಿನ ಜನ? ಅಥವಾ ಹೆಚ್ಚು-ಕಡಿಮೆ ೭೦-೯೦ % ಕನ್ನಡಿಗರು?

ವಿದ್ಯುತ್ ಉಪಕರಣಗಳನ್ನು (ಗ್ಯಾಜೆಟ್ಗಳನ್ನು) ಬಳಸುವ ಆ ೭೦-೯೦ % ಕನ್ನಡಿಗರಲ್ಲಿ,
ಎಷ್ಟು ಜನ ತಮ್ಮ ವಿದ್ಯುತ್ ಉಪಕರಣಗಳಲ್ಲಿ ಕನ್ನಡವನ್ನು ಬಳಸುತ್ತಾರೆ?

ಇಲ್ಲ, ನಾನು ಕೇಳಿದ್ದು "ಎಷ್ಟು ಜನ ಕನ್ನಡಿಗರು ಆಂಗ್ಲದ ಅಕ್ಷರಗಳನ್ನು ಬಳಸಿ ಕನ್ನಡದ ಪದಗಳನ್ನು ಬರೆಯಬಲ್ಲರು" ಎಂದಲ್ಲ, ಹಾಗೆ ಮಾಡುವುದು ಕನ್ನಡಸೇವೆಯೂ ಅಲ್ಲ.

ಹಾಗಾದರೆ, ಅವರೆಲ್ಲ ತಮ್ಮ ವಿದ್ಯುತ್ ಉಪಕರಣಗಳಲ್ಲಿ ಹಿಂದಿ ಬಳಸುತ್ತಾರಾ?
ಇಲ್ಲ, ಅವರಲ್ಲಿ ಸಾಕಷ್ಟು ಕನ್ನಡಿಗರು ಪರದೇಶಿ ಭಾಷೆಯಾದ ಆಂಗ್ಲವನ್ನು ಬಳಸುತ್ತಾರೆ!!!

ಯಾರಾದರೂ "ನನ್ನ ವಿದ್ಯುತ್ ಉಪಕರಣಗಳಲ್ಲಿ ಕನ್ನಡಕ್ಕೆ ಬೆಂಬಲವಿಲ್ಲ" ಎಂದ್ಹೇಳಿದಿರಾ?!

ಅದು ಯಾಕೆಂದರೆ, ಕನ್ನಡಕ್ಕೆ ನಿಮ್ಮ ಸಂಪೂರ್ಣ ಬೆಂಬಲವಿಲ್ಲವಲ್ಲಾ ಅದಕ್ಕೇ! ನಿಮ್ಮ ವಿದ್ಯುತ್ ಉಪಕರಣಗಳನ್ನು (ಗ್ಯಾಜೆಟ್ಗಳನ್ನು) ತಯಾರಿಸಿದವರು "ತಮ್ಮ ಉತ್ಪನ್ನಗಳಲ್ಲಿ ಕನ್ನಡ ಭಾಷೆಗೆ ಬೆಂಬಲ ನೀಡಲು ಮಾಡುವ ಹೂಡಿಕೆ ವ್ಯರ್ಥ ಅಥವಾ ಲಾಭದಾಯಕವಲ್ಲ" ಎಂದು ಭಾವಿಸಿರುವುದೇ ಅದಕ್ಕೆ ಕಾರಣ.

ಮತ್ತು, ವಿವಿಧ ಉತ್ಪನ್ನಗಳ ತಯಾರಕರು ಹಾಗೆ ಯೋಚಿಸಲು ಪ್ರಮುಖ ಕಾರಣವೇನೆಂದರೆ "ನಿರೀಕ್ಷೆಗೆ ತಕ್ಕಷ್ಟು ಕನ್ನಡಿಗರು ತಮ್ಮ ದೈನಂದಿನ ಉಪಕರಣಗಳಲ್ಲಿ ಕನ್ನಡವನ್ನೇ ಬಳಸದಿರುವುದು"!


ಬೇರೆ ದೇಶಗಳಲ್ಲಿ ತಮ್ಮ ಶಾಖೆಗಳನ್ನು ಹೊಂದಿರುವ ಭಾರತೀಯ ಉಪಹಾರಗೃಹದ (ಹೋಟೆಲ್ ಮತ್ತು ರೆಸ್ಟೋರಂಟ್) ಕಂಪನಿಗಳು ಸಾಕಷ್ಟಿವೆ.

ಆ ವಿದೇಶಿ ಶಾಖೆಗಳಲ್ಲಿ (ವಿಶೇಷವಾಗಿ ಸ್ಪೇನ್, ಜರ್ಮನಿ, ರಷಿಯಾ, ಜಪಾನ್, ತೈವಾನ್, ಅರಬ್ ದೇಶಗಳು ಮತ್ತಿತರೆ ಆಂಗ್ಲೇತರ ದೇಶಗಳಲ್ಲಿ) ನೌಕರರನ್ನು ಮತ್ತು ಅಲ್ಲಿನ ವಾತಾವರಣವನ್ನು ಸ್ಥಳೀಯ ಭಾಷೆಗೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ.

ಉದಾಹರಣೆಗೆ, ಭಾರತೀಯ ಹೋಟೆಲ್ ಕಂಪನಿಯೊಂದು ಜರ್ಮನಿಯಲ್ಲಿ ಶಾಖೆಯನ್ನು ಆರಂಭಿಸುವಾಗ ಅಲ್ಲಿ ಜರ್ಮನ್ ಭಾಷೆ ಬರುವ ಜನರನ್ನೇ ಕೆಲಸಕ್ಕೆ ನೇಮಿಸಿಕೊಳ್ಳುತ್ತದೆ.

ಕರ್ನಾಟಕದೊಳಗಡೆ ಅನೇಕ ಹೋಟೆಲ್ ಮತ್ತು ರೆಸ್ಟೋರಂಟ್ ಕಂಪನಿಗಳು ವ್ಯಾಪಾರ ಮಾಡುತ್ತಿವೆ.

ಅವುಗಳಲ್ಲಿ ಎಷ್ಟು ಹೋಟೆಲ್ ಮತ್ತು ರೆಸ್ಟೋರಂಟ್ಗಳಲ್ಲಿ ಕನಿಷ್ಟ ಪಕ್ಷ, ಮೆನು ಐಟಂಗಳು ಕನ್ನಡದಲ್ಲಿ ಬರೆಯಲಾಗಿರುತ್ತವೆ (ಆಂಗ್ಲ ಅಥವಾ ಇನ್ಯಾವುದೊ ಭಾಷೆಯ ಜೊತೆಗೆ ಆದರೂ ಸರಿ)?


ಕರ್ನಾಟಕ ಸರ್ಕಾರದ ಅನೇಕ ಪತ್ರಗಳು, ಅರ್ಜಿಗಳು, ಇತರೆ ಕಡತಗಳು ಇರುವುದು ಕನ್ನಡ ಅಥವಾ ಹಿಂದಿಯಲ್ಲಿ ಅಲ್ಲ, ಬದಲಿಗೆ ಪರದೇಶಿ ಆಂಗ್ಲದಲ್ಲಿ!

ಅನೇಕ ಬ್ಯಾಂಕ್ ಮತ್ತಿತರೆ ಕಚೇರಿಗಳ ಪತ್ರಗಳು, ಅರ್ಜಿಗಳು, ಇತರೆ ಕಡತಗಳು ಇರುವುದು ಕನ್ನಡ ಅಥವಾ ಹಿಂದಿಯಲ್ಲಿ ಅಲ್ಲ, ಬದಲಿಗೆ ಪರದೇಶಿ ಆಂಗ್ಲದಲ್ಲಿ!

ನ್ಯಾಯಾಂಗಕ್ಕೆ (ಕೋರ್ಟು-ಕಚೇರಿಗೆ) ಸಂಬಂಧಪಟ್ಟ ಕಡತಗಳೆಲ್ಲವೂ (ಅಥವಾ ಅತೀ ಹೆಚ್ಚಿನ ಕಡತಗಳು) ಇರುವುದು ಕನ್ನಡ ಅಥವಾ ಹಿಂದಿಯಲ್ಲಿ ಅಲ್ಲ, ಬದಲಿಗೆ ಪರದೇಶಿ ಆಂಗ್ಲದಲ್ಲಿ!


ಕನ್ನಡದ ಎಷ್ಟು ಮಾಧ್ಯಮಗಳು (ಡಿಜಿಟಲ್ ಮತ್ತು ಮುದ್ರಿತ ಮಾಧ್ಯಮ ಎರಡೂ) ತಮ್ಮೊಳಗೆ ಕನ್ನಡವನ್ನು ಬಳಸುತ್ತವೆ (ಕಂಗ್ಲಿಷ್ ಅಲ್ಲ, ಕನ್ನಡ)?

ನನಗೀಗಲೂ ನೆನಪಿದೆ, ಕೆಲವರ್ಷಗಳ ಹಿಂದೆ (ಈಗಿರುವ ಆಧುನಿಕ ಮಾಧ್ಯಮಗಳು ಮಾರುಕಟ್ಟೆಗೆ ಬಂದು ತುಂಬಿಕೊಳ್ಳುವ ಆರಂಭದ ದಿನಗಳು), ಎಲ್ಲ ಕನ್ನಡದ ಮಾಧ್ಯಮಗಳು ಸ್ವಚ್ಛವಾದ ಕನ್ನಡವನ್ನು ಬಳಸುತ್ತಿದ್ದವು ಕಂಗ್ಲಿಷನ್ನಲ್ಲ.

ಆದರೆ ನಿಧಾನವಾಗಿ, ಅನೇಕ ಮಾಧ್ಯಮಗಳು ಕನ್ನಡದ ವಾಕ್ಯಗಳೊಳಗೆ ಪರದೇಶಿ ಆಂಗ್ಲದ ಪದಗಳನ್ನು ಸೇರಿಸಿ ಬಳಸುವ ಕಂಗ್ಲಿಷ್ ರೂಢಿಯನ್ನು ನಮ್ಮ ಸಮಾಜದೊಳಗೆ ನುಸುಳುವಂತೆ ಮಾಡಿದವು, ಇದರ ಪರಿಣಾಮವಾಗಿ ಕನ್ನಡ ಶಬ್ಧಭಂಡಾರದ ಏಳಿಗೆಗೆ ಕೊಡಲಿಏಟು ಬಿದ್ದಿತು.

"ಕಂಗ್ಲಿಷ್ ಬಳಸುವುದು ಒಂದು ರೀತಿಯ ಪೊಳ್ಳು ಹಿರಿಮೆ" ಮತ್ತು "ಯಾವುದೇ ಒಂದು ವಾಕ್ಯವನ್ನು ಪೂರ್ತಿಯಾಗಿ ಕನ್ನಡದ ಪದಗಳನ್ನು ಬಳಸಿ ಮಾತನಾಡುವ ವ್ಯಕ್ತಿಯು ಅವಿದ್ಯಾವಂತನೇನೋ" ಎಂದು ಯೋಚಿಸುವಂತೆ ನಮ್ಮ ಸಮಾಜವನ್ನು ಈ ಮಾಧ್ಯಮಗಳು ಕೆಡಿಸಿಟ್ಟವು.

ಕನ್ನಡದ ಮಾಧ್ಯಮಗಳು ಪ್ರಸಾರ ಮಾಡುವ ಕಾರ್ಯಕ್ರಮಗಳೆಲ್ಲವು ಕನ್ನಡಿಗರಿಗೋಸ್ಕರ ಎಂದಾದರೆ ಅವುಗಳಲ್ಲಿ ಪರದೇಶಿ ಆಂಗ್ಲಕ್ಕೆ ಜಾಗವೇಕೆ?
ಹೇಗಿದ್ದರೂ ಆ ಕಾರ್ಯಕ್ರಮಗಳ ವೀಕ್ಷಕರು ಕನ್ನಡಿಗರು, ಅಂದಮೇಲೆ ಕಂಗ್ಲಿಷ್ ಬದಲಿಗೆ ಸ್ವಚ್ಛ ಕನ್ನಡವನ್ನೇ ಬಳಸಿ ಈ ಕಾಲದ ಕನ್ನಡಿಗರಿಗೆ ಸ್ವಚ್ಛವಾದ ಕನ್ನಡವನ್ನು ಕಲಿಸಬಹುದಲ್ಲ?!


ಭಾಷಾ-ಸ್ವಾತಂತ್ಯ್ರವು ಭಾಷಾ-ಜವಾಬ್ದಾರಿಗಳೊಂದಿಗೆ ಬರುತ್ತದೆ!





ಈ ತರಹದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಅವೆಲ್ಲವುಗಳ ಉದ್ದೇಶ ಇಷ್ಟೇ:

"ಹಿಂದಿಯು ಬಹುಶಃ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು ಆದರೆ ಆಂಗ್ಲವು ಕನ್ನಡಕ್ಕೆ ಇಂದಿನ ಬೆದರಿಕೆಯಾಗಿದೆ.
ಹಿಂದಿ ಅಥವಾ ಇನ್ಯಾವುದೋ ಭಾಷೆಯ ಹೇರಿಕೆ ಬಗ್ಗೆ ಮಾತನಾಡುವ ಮೊದಲು ಆಂಗ್ಲದ ಹೇರಿಕೆಯ ವಿರುದ್ಧ ಚಳುವಳಿಯ ಅವಶ್ಯಕತೆಯಿದೆ!
ಹಾಗೆಯೇ... ನಿಮ್ಮ ವಿರೋಧ ಹಿಂದಿ ಭಾಷೆಗಷ್ಟೇ ಸೀಮಿತವಾ ಅಥವಾ ಆಂಗ್ಲದ ಸಹಿತ ಯಾವುದೇ ಪರಭಾಷೆಗಾ ಎಂದೊಮ್ಮೆ ಯೋಚಿಸಿನೋಡಿ!"

"ಹಿಂದೀಗಿಂತ ಆಂಗ್ಲ ಉತ್ತಮ" ಎಂದು ನೀವೇನಾದರು ಯೋಚಿಸುತ್ತಿದ್ದರೆ ಈ ಲೇಖನವನ್ನು ಓದಿ.


ಮೋದಿ ಅಥವಾ ಭಾಜಪವು (ಯಾವುದೇ ವ್ಯಕ್ತಿ ಅಥವಾ ವಸ್ತುವು) ಕನ್ನಡವನ್ನು (ಯಾವುದೇ ಭಾಷೆಯನ್ನು) ಹಾಳುಮಾಡಲಾಗದು. ಒಂದು ಭಾಷೆ ಹಾಳಾಗಲು ಮುಖ್ಯ ಕಾರಣ ಆ ಭಾಷೆಯನ್ನು ಸಮರ್ಪಕವಾಗಿ ಬಳಸದ ಅದೇ ಭಾಷೆಯ ಜನ.


"ಮುಂದಿನ ಸಲ "ಹಿಂದಿ ಹೇರಿಕೆ" ಎಂದು ನೀವು ಕೂಗುವ ಮುನ್ನ "ಕನ್ನಡದ ಮೇಲೆ ನಿಮಗೆ ನಿಜವಾಗಿಯೂ ಎಷ್ಟು ಪ್ರೀತಿ ಇದೆ" ಎಂದರಿತುಕೊಳ್ಳಲು ನಿಮ್ಮದೇ ದಿನಚರಿಯನ್ನೊಮ್ಮೆ ನೋಡಿಕೊಳ್ಳಿ! ಮತ್ತು ನೆನಪಿರಲಿ, ಪರದೇಶಿ ಆಂಗ್ಲದ ಮುಂದೆ ಕನ್ನಡವು ಈಗಾಗಲೇ ಸಾಕಷ್ಟು ಸೋತಿದೆ ಮತ್ತು ಇನ್ನೂ ಸೋಲುತ್ತಲೇ ಇದೆ!



ಈ ಲೇಖನದ ಸಾರಾಂಶವನ್ನು ಕನ್ನಡೇತರ ಭಾರತೀಯರೊಂದಿಗೆ ಪರದೇಶಿ ಆಂಗ್ಲದ ಬದಲು ಸ್ವದೇಶಿ ಸಂಸ್ಕೃತದಲ್ಲಿಯೇ ನಾನು ತಿಳಿಸುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು!




  ಉಲ್ಲೇಖಗಳು/ಹೆಚ್ಚಿನ ಮಾಹಿತಿ