ಅರಣ್ಯ ಕೃಷಿ - ರೈತ ಖುಷಿ! ಇದು ನವಯುಗ ರೈತರ ಆಶಾಕಿರಣ - ಹಳತು ಹೊನ್ನು


ಮನುಷ್ಯರು ಪ್ರಕೃತಿಗೆ ವಿರುದ್ಧವಾಗಿ ಜೀವನ ನಡೆಸಲು ಅಸಾಧ್ಯ. ಹೀಗಿರುವಾಗ ರೈತರು ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಬದುಕಲು ಹೇಗೆ ತಾನೇ ಆಗುವುದು?! ರೈತರೂ ಮನುಷ್ಯರೇ ಅಲ್ಲವೆ?!


ಈಗಿನ ರೈತರು ನಿಮ್ಮ-ನಿಮ್ಮ ತಾತ-ಮುತ್ತಾತರ ಕಾಲವನ್ನು ನೆನೆಸಿಕೊಳ್ಳಿ. ಆಗ ಯಾವುದೇ ಸರ್ಕಾರಗಳೂ "ಸಾಲ-ಮನ್ನಾ" ಮಾಡುತ್ತಿರಲಿಲ್ಲ. ಆಗ ಬೇರೆ ಕಡೆಯಿಂದ ಬೀಜಗಳನ್ನು ತರುವ ರೈತರ ಸಂಖ್ಯೆ ವಿರಳ, ಹಾಗೆಯೇ ರಸಾಯನಿಕ ಗೊಬ್ಬರವಂತೂ ಬಳಕೆಯಲ್ಲೇ ಇರಲಿಲ್ಲ.


ಆಗಿನ ಹೊಲಗಳ ಬೇಲಿ ಯಾವಾಗಲು ಹಸಿರಿನಿಂದ ಕಂಗೊಳಿಸುತ್ತಿತ್ತು. ಹಲಸು, ಹುಣಸೆ, ನುಗ್ಗೆ, ಸಂಪಿಗೆ, ನೇರಳೆ, ಬೇವು, ಯಕ್ಕಿ, ಬಾರೆ, ಬಳವಲ, ಸೀತಾಫಲ, ರಾಮಫಲ, ಜಾಲಿ, ಇತ್ಯಾದಿ ಮರ-ಗಿಡಗಳೇ ಆಗಿನ ಹೊಲಗಳ ಜೀವಂತ ಬೇಲಿಗಳು.

ಒಂದೂರಿಂದ ಇನ್ನೊಂದೂರಿಗೆ ಹೊರಟರೆ ಸಾಲು ಮರಗಳ ನೆರಳು ರಸ್ತೆಗೆ ಚಪ್ಪರ ಹೊದಿಸಿದ ಅನುಭವ ನೀಡುತ್ತಿತ್ತು.

ಆದರೆ ಕಾಲಕ್ರಮೇಣ "ಮರಗಳ ನೆರಳಿಂದ ಜಾಗ ವ್ಯರ್ಥ" ಎನ್ನುತ್ತಾ ಹೊರಟ ರೈತ ಸಮುದಾಯ "ಮರಗಳಿದ್ದರಷ್ಟೇ ಮಳೆ-ಬೆಳೆ" ಎನ್ನುವ ಸತ್ಯವನ್ನೇ ಮರೆಯಿತು.



  •    ಆಗಿನ ಮಲೆನಾಡು ಈಗಿನ ಅರೆ-ಮಲೆನಾಡಾಗಿದೆ;
  •    ಆಗಿನ ಅರೆ-ಮಲೆನಾಡು ಈಗಿನ ಬಯಲುಸೀಮೆಯಾಗಿದೆ;
  •    ಆಗಿನ ಬಯಲುಸೀಮೆ ಈಗಿನ ಮರುಭೂಮಿಯಾಗಿದೆ!




ಒಂದೂರಿಂದ ಇನ್ನೊಂದೂರಿಗೆ ಹೊರಟರೆ ಕಣ್ಣು-ಹಾಯಿಸಿದಷ್ಟು ದೂರ ಬಿಸಿಲಿಗೆ ಕಾದು ನಿಂತಿರುವ ಒಣ ಭೂಮಿ ಕಣ್ಣಿಗೆ ರಾಚುತ್ತದೆ!

"ಬಂದರೆ ನೆರೆ ಇಲ್ಲವೆ ಬರ" ಎನ್ನುವ ಹಂತಕ್ಕೆ ಬಂದು ನಿಂತಿರುವ ಈ ಕಾಲದಲ್ಲಿ ನಾವು ಸರಿಯಾದ ಕ್ರಮಗಳನ್ನು ಕೈಗೊಳ್ಳದೆ ಹೋದರೆ, "ನರಕ ಎಂದರೆ ಹೇಗಿರುತ್ತದೆ" ಎನ್ನುವ ಅನುಭವ ರೈತರಿಗಷ್ಟೇ ಅಲ್ಲ, ಎಲ್ಲಾ ಜೀವಿಗಳಿಗೆ ಆಗುತ್ತದೆ!

ಈಗ ಬಂದಿರುವ ಕ್ಲಿಷ್ಟಕರ ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ರೈತರ ಪಾತ್ರ ಬಹು ದೊಡ್ಡದು. ಬರಡಾಗಿರುವ ಭೂಮಿಯನ್ನು ಮತ್ತೇ ಹಸಿರಿನಿಂದ ಕಂಗೊಳಿಸುವಂತೆ ಮಾಡಿದರೆ, ತುಸು ಚೈತನ್ಯ ಪಡೆಯಬಹುದು.



  •    ಹೊಲದ ಬೇಲಿಗೆ ನೇರವಾಗಿ-ಎತ್ತರಕ್ಕೆ ಬೆಳೆಯುವ ಮರಗಳನ್ನಾದರೂ ಬೆಳೆಸಿ.
  •    ಬಯಲಕೃಷಿ ಬದಲಿಗೆ ಅರಣ್ಯಕೃಷಿ ಬಳಸಿ.
  •    ಹೊಲದಲ್ಲಿ ಮರಗಳ ಆಧಾರಿತ ಬೆಳೆಗಳನ್ನು ಬೆಳೆಯಿರಿ.


  •    ಮಿಶ್ರಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ವರ್ಷಪೂರ್ತಿ ಆದಾಯ ಪಡೆಯಬಹುದು.
  •    ಬೆಳೆ-ಹಂತಗಳನ್ನು (ಲೇಯರಿಂಗ್) ಅಳವಡಿಸಿಕೊಂಡರೆ ಒಂದಿಂಚು ಭೂಮಿಯೂ ಖಾಲಿ ಉಳಿಯದು.
  •    ಕೇವಲ ಈ ಕ್ಷಣದ ಲಾಭವನ್ನಷ್ಟೇ ನೋಡದೆ, ದೂರದೃಷ್ಟಿ ಹೊಂದಿದ ಜಾಣ ರೈತ್ರರಾಗಿ!




  ಉಲ್ಲೇಖಗಳು/ಹೆಚ್ಚಿನ ಮಾಹಿತಿ