ವರ್ಷಕ್ಕೊಮ್ಮೆ "ಶುಭಾಶಯ" ಎಂದರೆ ಸಾಕೆ?!! - ಹಳತು ಹೊನ್ನು


ವರ್ಷಕ್ಕೊಮ್ಮೆ "ಶುಭಾಶಯ" ಎಂದರೆ ಸಾಕೆ?!!
ಕನ್ನಡ ಬಳಕೆ ಹೆಚ್ಚಿಸಿ.
ಆಂಗ್ಲ ಸಹಿತ ಪರಭಾಷಾ ವ್ಯಾಮೋಹ ತ್ಯಜಿಸಿ!

ಅನಿವಾರ್ಯವಿದ್ದಲ್ಲಷ್ಟೇ ಪರಭಾಷೆಯ ಬಳಕೆ ಇರಲಿ,
ಪರಭಾಷೆಗಳೇ ಮಾತೃಭಾಷೆ ಆಗದಿರಲಿ!


ತಮಿಳು, ಮಲಯಾಳಂ, ಮರಾಠಿ, ಹಿಂದಿ, ಆಂಗ್ಲ, ಸ್ಪ್ಯಾನಿಷ್, ಜರ್ಮನ್, ರಷ್ಯನ್, ಕೊರಿಯನ್, ಲ್ಯಾಟಿನ್, ಗ್ರೀಕ್, ಫ್ರೆಂಚ್ ಇತ್ಯಾದಿ ಭಾಷೆಯ ಜನರನ್ನು ನೋಡಿ ಕಲಿಯಿರಿ - "ನಮ್ಮ ಭಾಷೆಯನ್ನು ನಾವು ಬಳಸಿದರಷ್ಟೇ ಅದು ಉಳಿಯುತ್ತದೆ ಮತ್ತು ಬೆಳೆಯುತ್ತದೆ"!

ಸ್ಪೇನ್ ಜನರ ದೇಶ ಆಂಗ್ಲರ ದೇಶದೊಂದಿಗೆ ಗಡಿ ಹಂಚಿಕೊಂಡಿದೆ, ಆದರೂ ಸ್ಪೇನ್ ಜನರು ಎಲ್ಲಾ ಕಡೆ ತಮ್ಮದೇ ಭಾಷೆ ಬಳಸುತ್ತಾರೆ.

ಆಂಗ್ಲರ ದೇಶದಿಂದ ಸಾವಿರಾರು ಕಿಲೋಮೀಟರ್ ದೂರದ ಕನ್ನಡಿಗರು "ತಮ್ಮ ಮಕ್ಕಳು ತಮ್ಮನ್ನು ಅಪ್ಪ-ಅಮ್ಮ ಎನ್ನುವ ಬದಲು ಮಮ್ಮಿ-ಡ್ಯಾಡಿ ಎಂದು ಕರೆಯಲಿ" ಎಂದು ಬಯಸುತ್ತಾರೆ!

ರಷ್ಯಾ, ಜರ್ಮನಿ, ಫ್ರಾನ್ಸ್, ಸ್ಪೇನ್, ಚೀನಾ, ಜಪಾನ್, ಕೊರಿಯಾದ ಮಕ್ಕಳು ತಮ್ಮ-ತಮ್ಮ ಮಾತೃಭಾಷೆಯ ಪದ್ಯ-ಗದ್ಯಗಳನ್ನು ಹಾಡುತ್ತಾ ಬೆಳೆದರೆ,

ತಮ್ಮ ಮಕ್ಕಳು "ಮೇರಿ ಹ್ಯಾಡ್ ಅ ಲಿಟ್ಟಲ್ ಲ್ಯಾಂಬ್", "ಜಾನಿ-ಜಾನಿ ಯೆಸ್ ಪಪ್ಪಾ" ಎನ್ನುತ್ತಾ ಬೆಳೆಯಬೇಕೆಂದು ಕನ್ನಡದ ಮೂರ್ಖ ಪೋಷಕರು ಆಸೆಪಡುತ್ತಾರೆ!

ಹಿಂದಿ ವಿರೋಧಿಸುವ ಕನ್ನಡಿಗರು "ಆಂಗ್ಲ ನಮಗೆ ಕೆಲಸ ಕೊಡುತ್ತದೆ" ಎಂದು ಆಂಗ್ಲದ ಅಟ್ಟಹಾಸದ ಮುಂದೆ ಜಾನ ಕುರುಡು ತೋರುತ್ತಾರೆ!

ಆಂಗ್ಲ ಭಾಷೆಯು ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಜಾಪನೀಸ್ ಇತ್ಯಾದಿ ಭಾಷೆಯ ಜನರಿಗೂ ಕೆಲಸ ನೀಡಿದೆ ಅಲ್ಲವೇ? ಹಾಗೆಂದ ಮಾತ್ರಕ್ಕೆ ಅಲ್ಲಿಯ ಎಷ್ಟು ಜನ ಆಂಗ್ಲವನ್ನು ತಮ್ಮ ಮನೆಯೊಳಗೆ ನುಸುಳಲು ಬಿಟ್ಟುಕೊಂಡಿದ್ದಾರೆ?!!

ಕೇವಲ ಆಂಗ್ಲ ಒಂದೇ ಅಲ್ಲ, ಹಿಂದಿ ಭಾಷೆ ಕೂಡ ಲಕ್ಷಾಂತರ ಕನ್ನಡಿಗರಿಗೆ ಕೆಲಸ ನೀಡಿದೆ ಎನ್ನುವುದು ನೆನಪಿರಲಿ!

ನಿಮ್ಮ ಆಂಗ್ಲದ ವ್ಯಾಮೋಹವನ್ನು ಸಮರ್ಥಿಸಿಕೊಳ್ಳಲು "ಈಗ ಸುತ್ತಮುತ್ತಲಿನ ವಾತಾವರಣ ಹಾಗಿದೆ ಅದಕ್ಕೇ ನಾವೂ ಆಂಗ್ಲದ ಹಿಂದೆ ಬಿದ್ದಿದ್ದೇವೆ" ಎನ್ನಬೇಡಿ. ಏಕೆಂದರೆ, ನೀವು ಬೇರೆಯವರಿಗೆ ಬೆರಳು ತೋರಿಸಿ ಈ ಕಾರಣ ಕೊಟ್ಟರೆ, ಅವರು ನಿಮ್ಮೆಡೆಗೆ ಬೊಟ್ಟುಮಾಡಿ ಇದೇ ಕಾರಣ ಹೇಳುವರಷ್ಟೇ!

ಮೊದಲು ನೀವು ಕನ್ನಡವನ್ನು ಪ್ರೀತಿಸಿ-ಬಳಸಿ, ನಂತರ ಇತರರಿಗೆ ಕನ್ನಡವನ್ನು ಬಳಸಲು ಪ್ರೇರೇಪಿಸುವ ಮೂಲಕ ನಿಮ್ಮ ಭಾಷೆಯನ್ನು ಬೆಳೆಸಿ.

"ಅಯ್ಯೋ ಪಾಪ! ಅವರು ಹೊರಗಿನಿಂದ ಬಂದವರು ಅವರಿಗೆ ಕನ್ನಡ ಬರದೆ ಇರಬಹುದು" ಎಂದು ಅಂದುಕೊಂಡು ನೀವೇ ಅವರ ಭಾಷೆಯಲ್ಲಿ ಮಾತನಾಡಲು ಆರಂಭಿಸಬೇಡಿ.

ನೀವು ಮಹಾರಾಷ್ಟ್ರ, ತಮಿಳುನಾಡು, ಆಂದ್ರ-ತೆಲಂಗಾಣ, ಕೇರಳ, ಸ್ಪೇನ್, ಫ್ರಾನ್ಸ್, ಇಟಲಿ, ಜರ್ಮನಿ, ರಷ್ಯಾ, ಜಪಾನ್, ಕೊರಿಯಾ ಇತ್ಯಾದಿ ಸ್ಥಳಗಳಿಗೆ ಹೋದಾಗ ನಿಮ್ಮನ್ನು ನೋಡಿ ಎಷ್ಟು ಜನ:

"ಅಯ್ಯೋ ಪಾಪ! ಅವರು ಕನ್ನಡಿಗರು ಅವರಿಗೆ ಈ ನೆಲದ ಭಾಷೆ ಬರದೆ ಇರಬಹುದು" ಎಂದುಕೊಂಡು ನಿಮ್ಮೊಡನೆ ಕನ್ನಡದಲ್ಲಿ ಮಾತನಾಡುತ್ತಾರೆ?!


  ಉಲ್ಲೇಖಗಳು/ಹೆಚ್ಚಿನ ಮಾಹಿತಿ